ರಾಯಚೂರು.05.ಆಗಸ್ಟ್ .25: ಜಿಲ್ಲೆಯಲ್ಲಿ 18 ವರ್ಷದೊಳಗಿನ ಮಕ್ಕಳ ಪ್ರಕರಣಗಳಲ್ಲಿ ಸುದ್ದಿಯನ್ನು ಬಿತ್ತರಿಸುವಾಗ ಮಕ್ಕಳ ಮಾಹಿತಿಯನ್ನು ಗೌಪ್ಯವಾಗಿ ಇಡಬೇಕೆಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಾದ ಅಮರೇಶ್ ಹಾವಿನ್ ಅವರು ತಿಳಿಸಿದ್ದಾರೆ.
ಬಾಲನ್ಯಾಯ (ಮಕ್ಕಳ ರಕ್ಷಣೆ ಮತ್ತು ಪೋಷಣೆ) ಕಾಯ್ದೆ-2015ರ ಕಲಂ 74ರನ್ವಯ 18ವರ್ಷದೊಳಗಿನ ಮಕ್ಕಳ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುದ್ಧಿಯನ್ನು ಪ್ರಸಾರ ಮಾಡುವಾಗ ಮಕ್ಕಳ ವೈಯಕ್ತಿಕ ಮಾಹಿತಿಯನ್ನು ಮತ್ತು ಭಾವಚಿತ್ರವನ್ನು ಬಹಿರಂಗಪಡಿಸುವುದು ನಿರ್ಬಂಧಿಸಲಾಗಿದೆ.
ಅದರಂತೆ ಯಾವುದೇ ಮಗುವಿಗೆ ಸಂಬಂಧಿಸಿದ ಮಾಹಿತಿಯನ್ನು ತಮ್ಮ ಇಲಾಖೆಯಡಿ ಬರುವ ದೃಶ್ಯ ಮಾಧ್ಯಮಗಳು ಹಾಗೂ ಮುದ್ರಣ ಮಾಧ್ಯಮಗಳು, ಬಾಲನ್ಯಾಯ(ರಕ್ಷಣೆ ಮತ್ತು ಪೋಷಣೆ) ಕಾಯ್ದೆ-2015ರ ಕಲಂ 74ರಂತೆ ಮಕ್ಕಳ ಮಾಹಿತಿಯನ್ನು ಬಹಿರಂಗ ಪಡಿಸದಂತೆ ಸೂಚಿಸುವುದು. ಹಾಗೂ ಇತ್ತಿಚೇಗೆ ರಾಜ್ಯದ್ಯಾಂತ ಸುದ್ಧಿಯಾದ ತಾತಪ್ಪನ ಪ್ರಕರಣದಲ್ಲಿ ನೊಂದ ಬಾಲಕಿಯು ಅಪ್ರಾಪ್ತಗಳಾಗಿರುವುದರಿಂದ ಅವಳ ವೈಯಕ್ತಿಯ ಮಾಹಿತಿಯನ್ನು ಕೆಲವು ಮಾಧ್ಯಮಗಳಲ್ಲಿ ಪ್ರಸಾರ ಮಾಡಿರುತ್ತದೆ.
ಈ ಮಾಧ್ಯಮಗಳಲ್ಲಿ ಪ್ರಕಟವಾದ ವಿಡಿಯೋ ಮತ್ತು ಛಾಯಾಚಿತ್ರಗಳನ್ನು ಕೂಡಲೇ ಅಳಿಸಲು ಸಂಬಂಧಪಟ್ಟವರಿಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೊಸುಂಬೆ ಅವರು ಸೂಚಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕಟವಾದ ವಿಡಿಯೋ ಮತ್ತು ಛಾಯಚಿತ್ರಗಳನ್ನು ಅಳಿಸಲು ಕ್ರಮವಹಿಸುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.