Home » ಲೈವ್ ನ್ಯೂಸ್ » ಬೋಧಕೇತರ ಹುದ್ದೆ: ಶಿಕ್ಷಕರಿಗೆ ನಿಷೇಧ ಶಿಕ್ಷಣ ಇಲಾಖೆ ಮುಂದಾಗಿದೆ.

ಬೋಧಕೇತರ ಹುದ್ದೆ: ಶಿಕ್ಷಕರಿಗೆ ನಿಷೇಧ ಶಿಕ್ಷಣ ಇಲಾಖೆ ಮುಂದಾಗಿದೆ.

Facebook
X
WhatsApp
Telegram

ಬೆಂಗಳೂರು.22.ಮಾರ್ಚ್.26:ಶಿಕ್ಷಣ ಇಲಾಖೆ, ಬೋಧಕೇತರ ಹುದ್ದೆಗಳಿಗೆ ಶಿಕ್ಷಕರ ನಿಯೋಜನೆಯನ್ನು ಸಂಪೂರ್ಣ ನಿಷೇಧಿಸಲಿದೆ.  ಸರ್ಕಾರಿ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ನೀಗಿಸಿ, ಗುಣಮಟ್ಟದ ಶಿಕ್ಷಣ ಖಾತ್ರಿಯೂ ಸೇರಿ ಅನೇಕ ಸುಧಾರಣೆ ತರಲು ಶಿಕ್ಷಣ ಇಲಾಖೆ ಮುಂದಾಗಿದೇ.

ಶಾಲೆಗಳನ್ನು ಮೂರು ವರ್ಗಗಳಾಗಿ ವಿಂಗಡಿಸಿದೆ.ಕರ್ನಾಟಕ ಪಬ್ಲಿಕ್ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿಎಂಶ್ರೀ ಶಾಲೆಗಳನ್ನು ತುರ್ತು ಸೇವಾ ಗುಂಪು ಎಂದು ಪರಿಗಣಿಸಿದೆ. ಅದಕ್ಕಾಗಿ ಶಿಕ್ಷಕರ ವರ್ಗಾವಣೆ ಸ್ವರೂಪದಲ್ಲಿ ಆಮೂಲಾಗ್ರ ಬದಲಾವಣೆ ಒಳಗೊಂಡ ‘ಕರ್ನಾಟಕ ರಾಜ್ಯ ನಾಗರಿಕ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ಮಸೂದೆ-2026’ ರೂಪಿಸಿದೆ. ಈಗ ನಡೆಯುತ್ತಿರುವ ಅಧಿವೇಶನದಲ್ಲಿ ಮಸೂದೆ ಮಂಡಿಸುವ ಸಾಧ್ಯತೆ ಇದೆ.

ರಾಜ್ಯದಲ್ಲಿ ದಶಕಗಳಿಂದ ಶಿಕ್ಷಕರ ವರ್ಗಾವಣೆಗೆ ಇದ್ದ ಹಲವು ನಿರ್ಬಂಧಗಳನ್ನು ರದ್ದುಪಡಿಸಿ, 2022 ನವೆಂಬರ್‌ನಿಂದ ಜಾರಿಗೆ ಬರುವಂತೆ ಶಿಕ್ಷಕ ಸ್ನೇಹಿ ವರ್ಗಾವಣೆ ನೀತಿ ಜಾರಿಗೊಳಿಸಲಾಗಿತ್ತು. ಪರಸ್ಪರ ವರ್ಗಾವಣೆಗೆ ಸಮ್ಮತಿ ಸೂಚಿಸುವ ಜತೆಗೆ ಕೆಲಸಕ್ಕೆ ಸೇರಿದ ಮೊದಲ ಐದು ವರ್ಷ ಹಾಗೂ ನಿವೃತ್ತಿಗೆ ಮೊದಲಿನ ಐದು ವರ್ಷ ವರ್ಗಾವಣೆಗೆ ವಿನಾಯಿತಿ ನೀಡಲಾಗಿತ್ತು. ವರ್ಗಾವಣೆ ಕೋರಿ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು.

ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳು (371 ಜೆ ಅನ್ವಯ), ಮಲೆನಾಡು ವಲಯ ಹಾಗೂ ನಂಜುಂಡಪ್ಪ ವರದಿಯ ಅನ್ವಯ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಎಂದು ಗುರುತಿಸಲಾಗಿರುವ ತಾಲ್ಲೂಕುಗಳಿಗೆ ವರ್ಗಾವಣೆ ಕೋರುವವರಿಗೆ ವಿಶೇಷ ಆದ್ಯತೆ ನೀಡಲಾಗಿತ್ತು. ಈ ಎಲ್ಲ ಅಂಶಗಳನ್ನೂ ಉಳಿಸಿಕೊಂಡಿರುವ ಮಸೂದೆ, ಮತ್ತಷ್ಟು ಬದಲಾವಣೆಗೆ ದಾರಿ ಮಾಡಿಕೊಡಲಿದೆ.

ಶಾಲೆ, ಕಾಲೇಜುಗಳನ್ನು ತುರ್ತು ಸೇವೆ ಹಾಗೂ ಇತರೆ ಎಂದು ವಿಂಗಡಿಸಿದ್ದು, ವರ್ಗಾವಣೆಯಲ್ಲಿ ಮೊದಲ ವರ್ಗದ ಶಾಲೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಮೊದಲ ವರ್ಗದ ಹುದ್ದೆಗಳು ಭರ್ತಿಯಾದ ನಂತರವೇ ಎರಡನೇ ವರ್ಗದ ಶಾಲೆಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶ ನೀಡಲಾಗುತ್ತದೆ. ಮುಖ್ಯಶಿಕ್ಷಕರು, ಉಪ ಪ್ರಾಂಶುಪಾಲರು ಮತ್ತು ಪ್ರಾಂಶುಪಾಲರ ಹುದ್ದೆಗಳನ್ನು ತುರ್ತು ಸೇವೆಯಲ್ಲದ ಮೂರನೇ ವರ್ಗಕ್ಕೆ ಸೇರಿಸಲಾಗಿದೆ.

ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌), ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯ (ಸಿಟಿಇ) ಹಾಗೂ ರಾಜ್ಯ ಮಟ್ಟದ ಆಡಳಿತ ಕಚೇರಿಗಳ ಬೋಧನಾ ಹುದ್ದೆಗಳಿಗೆ ಕೌನ್ಸೆಲಿಂಗ್‌ ರಹಿತವಾಗಿ ವರ್ಗಾವಣೆ ಪಡೆಯಲು ಅವಕಾಶ ಮಾಡಿಕೊಡಲಾಗಿದೆ.

ಈ ಹುದ್ದೆಗಳಿಗೆ ವರ್ಗಾವಣೆ ಬಯಸುವವರು ಸಾಮಾನ್ಯ ಶಾಲೆಗಳಲ್ಲಿ ಕನಿಷ್ಠ 10 ವರ್ಷಗಳ ನಿರಂತರ ಸೇವೆ ಸಲ್ಲಿಸಿರಬೇಕು ಎಂಬ ನಿರ್ಬಂಧ ವಿಧಿಸಲಾಗುತ್ತಿದೆ. ಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಲ್ಲಿ ಕನಿಷ್ಠ ಸೇವಾ ಅವಧಿ ಪೂರ್ಣಗೊಳಿಸಿದ ಶಿಕ್ಷಕರು ಅಥವಾ ಉಪನ್ಯಾಸಕರಿಗೆ ಮೊದಲ ವರ್ಗದ ಹುದ್ದೆಗಳ ಲಭ್ಯತೆ ಆಧಾರದಲ್ಲಿ ವರ್ಗಾವಣೆ ಕೋರಲು ಅವಕಾಶ ನೀಡಲಾಗುತ್ತಿದೆ.

‘ಕಲ್ಯಾಣ’ಕ್ಕೆ ಒಂದು ದಶಕ ಕಡ್ಡಾಯ

ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಣ ಸುಧಾರಣೆಗೂ ಹೊಸ ಮಸೂದೆಯಲ್ಲಿ ಆದ್ಯತೆ ನೀಡಲಾಗಿದ್ದು, ಆ ಭಾಗದ ಜಿಲ್ಲೆಗಳಲ್ಲಿ ಶಿಕ್ಷಕರಾಗಿ ನೇಮಕವಾದವರಿಗೆ ಕನಿಷ್ಠ ಒಂದು ದಶಕ ಕೆಲಸ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಶಿಕ್ಷಕರಾಗಿ ನೇಮಕವಾದ ಅಭ್ಯರ್ಥಿಗಳು ಕನಿಷ್ಠ 10 ವರ್ಷಗಳ ಸೇವೆ ಸಲ್ಲಿಸಿದ ನಂತರವೇ ಕಲ್ಯಾಣ ಕರ್ನಾಟಕದ ಹೊರಗಿನ ಜಿಲ್ಲೆಗಳಿಗೆ ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಬಹುದು.

ಗರ್ಭಿಣಿ ಅಥವಾ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಗುವಿರುವ ಶಿಕ್ಷಕಿಯರು ತಾವು ಬಯಸಿದ ಸ್ಥಳ ಆಯ್ಕೆ ಮಾಡಿಕೊಳ್ಳಲು ಮೊದಲ ಪ್ರಾಶಸ್ತ್ಯ ನೀಡಲಾಗಿದೆ. ಎರಡು ಮಕ್ಕಳಿಗೆ ಈ ವಿನಾಯಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ಮೂರು ವರ್ಗಗಳು

ವರ್ಗ-1: ಕರ್ನಾಟಕ ಪಬ್ಲಿಕ್‌ ಶಾಲೆಗಳು, ಆದರ್ಶ ವಿದ್ಯಾಲಯಗಳು, ಪಿಎಂಶ್ರೀ ಶಾಲೆಗಳು

ವರ್ಗ 2: ವಿದ್ಯಾರ್ಥಿಗಳ ಸಂಖ್ಯೆ 250ಕ್ಕಿಂತ ಹೆಚ್ಚು ಸರ್ಕಾರಿ ಶಾಲೆಗಳು, ಪದವಿಪೂರ್ವ ಕಾಲೇಜುಗಳು

ವರ್ಗ 3: ವರ್ಗ 1 ಮತ್ತು 2ಕ್ಕೆ ಸೇರಿದ ಪ್ರೌಢ ಶಾಲಾ ಮುಖ್ಯಶಿಕ್ಷಕರು, ಉಪ ಪ್ರಾಂಶುಪಾಲರು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology