02/08/2025 4:59 PM

Translate Language

Home » ಲೈವ್ ನ್ಯೂಸ್ » ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಪತ್ರಿಕೋದ್ಯಮ ವಿಭಾಗ ಬಂದ್‌!

ಬೆಂಗಳೂರು ಉತ್ತರ ವಿಶ್ವವಿದ್ಯಾಲಯ: ಪತ್ರಿಕೋದ್ಯಮ ವಿಭಾಗ ಬಂದ್‌!

Facebook
X
WhatsApp
Telegram

ಕೂಲಾರ್ .22.ಜುಲೈ.25:- ವಿದ್ಯಾರ್ಥಿಗಳ ಕೊರತೆಯ ಕಾರಣವೊಡ್ಡಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಹಾಗೂ ಸಂವಹನ ಮಾಧ್ಯಮ ಕೋರ್ಸ್‌ನ ಸ್ನಾತಕೋತ್ತರ ವಿಭಾಗವನ್ನು ಪ್ರಸ್ತುತ 2025-26ನೇ ಶೈಕ್ಷಣಿಕ ಸಾಲಿನಿಂದ ಮುಚ್ಚಲಾಗುತ್ತಿದೆ. ಸಾಲಿನಲ್ಲಿ ಪ್ರವೇಶಾತಿಗೆ ಈ ವಿಭಾಗದಲ್ಲಿ ಯಾವುದೇ ಅರ್ಜಿ ಸ್ವೀಕರಿಸುತ್ತಿಲ್ಲ.

ಅಲ್ಲದೇ, ಈ ವಿಭಾಗಕ್ಕೆ ನೇಮಿಸಿಕೊಂಡಿರುವ ಅತಿಥಿ ಉಪನ್ಯಾಸಕರನ್ನು ಮುಂದುವರಿಸದಿರಲು ನಿರ್ಧರಿಸಲಾಗಿದೆ.

ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಿರಂಜನ ವಾನಳ್ಳಿ ‘ಪ್ರಜಾವಾಣಿ’ಗೆ ಈ ವಿಷಯ ಖಚಿತಪಡಿಸಿದ್ದು, ಸಿಂಡಿಕೇಟ್‌ ಹಾಗೂ ವಿದ್ಯಾವಿಷಯಕ ಪರಿಷತ್ತಿನ (ಅಕಾಡೆಮಿಕ್‌ ಕೌನ್ಸಿಲ್‌) ಸದಸ್ಯರನ್ನು ಒಳಗೊಂಡ ಸಮಿತಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ಮಂಗಸಂದ್ರ ಸ್ನಾತಕೋತ್ತರ ಕೇಂದ್ರದಲ್ಲಿನ ಪತ್ರಿಕೋದ್ಯಮ ವಿಭಾಗ ಹಾಗೂ ಇಂಗ್ಲಿಷ್‌ ವಿಭಾಗಕ್ಕೆ ಇತ್ತೀಚಿನ ವರ್ಷಗಳಲ್ಲಿ ತೀರಾ ಕಡಿಮೆ ಅರ್ಜಿಗಳು ಬರುತ್ತಿವೆ. ಈ ನಿಟ್ಟಿನಲ್ಲಿ ಈ ಎರಡು ವಿಭಾಗಗಳಿಗೆ ಈ ಶೈಕ್ಷಣಿಕ ಸಾಲಿನಲ್ಲಿ ಅರ್ಜಿಗಳನ್ನು ಆಹ್ವಾನಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ತೀರ್ಮಾನಿಸಲು ಸಮಿತಿ ರಚಿಸಲಾಗಿತ್ತು.

ವಿಶ್ವವಿದ್ಯಾಲಯದ ಮಂಗಸಂದ್ರದಲ್ಲಿನ ಸ್ನಾತಕೋತ್ತರ ವಿಭಾಗದ ನಿರ್ದೇಶಕಿ ಪ್ರೊ.ಡಿ.ಕುಮುದಾ ಅಧ್ಯಕ್ಷತೆಯ ಸಮಿತಿಯಲ್ಲಿ ಸಿಂಡಿಕೇಟ್‌ ಸದಸ್ಯರಾದ ಜೈದೀಪ್‌, ಸೀಸಂದ್ರ ಗೋಪಾಲಗೌಡ, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರಾದ ರಾಗೀತ ರಾಜೇಂದ್ರ, ಆರ್‌.ಶೋಭಿತಾ ಶಾಂತಕುಮಾರಿ ಹಾಗೂ ಬೋಧಕೇತರ ಸಿಬ್ಬಂದಿ ಶಿವಕುಮಾರ್‌ ಎಂ.ಸಿ (ಸಂಚಾಲಕ) ಇದ್ದರು.

ಸಮಿತಿ ಸದಸ್ಯರು 2021ರಿಂದ 2024ರವರೆಗಿನ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದಿರುವ ಹಾಗೂ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳ ಅಂಕಿಅಂಶಗಳನ್ನು ಪರಿಶೀಲಿಸಿದ್ದಾರೆ. ಈ ಎರಡೂ ವಿಭಾಗಗಳಿಗೆ ಕಡಿಮೆ ವಿದ್ಯಾರ್ಥಿಗಳು ಪ್ರವೇಶಾತಿ ಪಡೆಯುತ್ತಿರುವ ಕಾರಣ ವಿಶ್ವವಿದ್ಯಾಲಯದ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಉಂಟಾಗಿರುವ ಬಗ್ಗೆಯೂ ಚರ್ಚಿಸಿದ್ದಾರೆ.

2024-25ನೇ ಸಾಲಿನ ಪ್ರಕಾರ ಇಂಗ್ಲಿಷ್‌ ವಿಭಾಗದ 4ನೇ ಸೆಮಿಸ್ಟರ್‌ನಲ್ಲಿ 10 ವಿದ್ಯಾರ್ಥಿಗಳಿದ್ದು, 2ನೇ ಸೆಮಿಸ್ಟರ್‌ನಲ್ಲಿ ಕೇವಲ 8 ಮಂದಿ ಇದ್ದಾರೆ. ಪತ್ರಿಕೋದ್ಯಮ ವಿಭಾಗದ 4ನೇ ಸೆಮಿಸ್ಟರ್‌ನಲ್ಲಿ ಕೇವಲ ಒಬ್ಬ ವಿದ್ಯಾರ್ಥಿ, 2ನೇ ಸೆಮಿಸ್ಟರ್‌ನಲ್ಲಿ ಇಬ್ಬರು ಇದ್ದಾರೆ.

ಪತ್ರಿಕೋದ್ಯಮ ಕೋರ್ಸ್‌ನಲ್ಲಿ ತೀರಾ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಇರುವ ಕಾರಣ 2025-26ನೇ ಸಾಲಿನಿಂದ ಯಾವುದೇ ಅರ್ಜಿ ಆಹ್ವಾನಿಸದೆ ಮುಚ್ಚುವುದು ಹಾಗೂ ಇಂಗ್ಲಿಷ್‌ ವಿಭಾಗಕ್ಕೆ ಒಂದು ಬಾರಿ ಅರ್ಜಿ ಆಹ್ವಾನಿಸಲು ಸಮಿತಿಯು ನಿರ್ಣಯ ಕೈಗೊಂಡಿತು.

ಮಾತೃ ಸಂಸ್ಥೆ ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ಉತ್ತರ ವಿಶ್ವವಿದ್ಯಾಲಯದ ಅಧಿಸೂಚನೆ ಪ್ರಕಾರ ಸ್ನಾತಕೋತ್ತರ ವಿಭಾಗಕ್ಕೆ ಪ್ರವೇಶಾತಿ ಸಂಖ್ಯೆ ಕನಿಷ್ಠ 10 ವಿದ್ಯಾರ್ಥಿಗಳಿಗಿಂತ ಕಡಿಮೆ ಇದ್ದರೆ ಮುಚ್ಚಲು ಅವಕಾಶವಿದೆ. ಹಾಗೆಯೇ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕೊರತೆ ಉಂಟಾದರೆ ಇಂಗ್ಲಿಷ್‌ ವಿಭಾಗವನ್ನೂ ಮುಚ್ಚಲಾಗುತ್ತದೆ ಎಂದು ಕುಲಸಚಿವರು ಹೇಳಿದ್ದಾರೆ.

ಪ್ರೊ.ನಿರಂಜನ ವಾನಳ್ಳಿ ಕುಲಪತಿ ಬೆಂಗಳೂರು ಉತ್ತರ ವಿ.ವಿಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳು ಸಂಖ್ಯೆ ಕಡಿಮೆ ಇದ್ದು ವಿ.ವಿ ಮೇಲೆ ಆರ್ಥಿಕ ಹೊರೆ ಹೆಚ್ಚಿದೆ. ಕನಿಷ್ಠ 10 ವಿದ್ಯಾರ್ಥಿಗಳು ಇಲ್ಲದ ಕಾರಣ ವಿಭಾಗವನ್ನು ಈ ಸಾಲಿನಲ್ಲಿ ಮುಚ್ಚಲಾಗುತ್ತಿದೆ
ಪದವಿ ಮುಗಿದ ಮೇಲೆ ಎಲ್ಲಿ ಹೋಗಬೇಕು?

ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗ ಮುಚ್ಚುತ್ತಿರುವುದಕ್ಕೆ ಕೆಲ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಸ್ನಾತಕೋತ್ತರ ವಿಭಾಗದ ವಿವಿಧ ಕೋರ್ಸ್‌ಗಳಿಗೆ ಈಗಷ್ಟೆ ಅರ್ಜಿ ಆಹ್ವಾನಿಸಿ ಆಗಸ್ಟ್‌ 18ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ಅದಕ್ಕೂ ಮುಂಚೆಯೇ ಪತ್ರಿಕೋದ್ಯಮ ವಿಭಾಗ ಮುಚ್ಚಿರುವುದು ಏಕೆ? ಅರ್ಜಿ ಆಹ್ವಾನಿಸಿ ವಿದ್ಯಾರ್ಥಿಗಳು ಬಾರದಿದ್ದರೆ ಆಗ ಕ್ರಮ ವಹಿಸಬಹುದಿತ್ತು ಎಂದಿದ್ದಾರೆ.

ಬೆಂಗಳೂರು ನಗರದ ಕೆಲ ಭಾಗ ಚಿಕ್ಕಬಳ್ಳಾಪುರ ಕೋಲಾರ ಜಿಲ್ಲೆಯ ವಿವಿಧೆಡೆಯ ಕಾಲೇಜುಗಳ ಪದವಿ ಕೋರ್ಸ್‌ಗಳಲ್ಲಿ ಪತ್ರಿಕೋದ್ಯಮ ವಿಷಯ ಇದೆ. ಇಲ್ಲಿ ಪದವಿಯಲ್ಲಿ ಪತ್ರಿಕೋದ್ಯಮ ಓದುತ್ತಿರುವ ನೂರಾರು ವಿದ್ಯಾರ್ಥಿಗಳು ಇದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಓದಲು ಬಯಸಿದರೆ ಅವರು ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಜೊತೆಗೆ ಪತ್ರಿಕೋದ್ಯಮ ಕೋರ್ಸ್‌ನತ್ತ ವಿದ್ಯಾರ್ಥಿಗಳ ಆಸಕ್ತಿ ಕಡಿಮೆ ಆಗಲು ಕಾರಣವೇನು ಎಂಬ ಚರ್ಚೆಯೂ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿದೆ.

ಇಂಗ್ಲಿಷ್‌ ವಿಭಾಗಕ್ಕೂ ಕುತ್ತು?

2025-26ನೇ ಸಾಲಿನಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದರೆ ಇಂಗ್ಲಿಷ್‌ ವಿಭಾಗವನ್ನೂ ಬಂದ್‌ ಮಾಡಲು ಸಿಂಡಿಕೇಟ್‌ ಹಾಗೂ ವಿದ್ಯಾವಿಷಯಕ ಪರಿಷತ್‌ ಸದಸ್ಯರನ್ನು ಒಳಗೊಂಡ ಸಮಿತಿ ನಿರ್ಣಯ ಕೈಗೊಂಡಿದೆ. ಈ ಸಂಬಂಧ ಕುಲಸಚಿವರು ಪ್ರಕಟಣೆ ಹೊರಡಿಸಿದ್ದು ಯುಯುಸಿಎಂಎಸ್‌ ಆನ್‌ಲೈನ್‌ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲು ಆಗಸ್ಟ್‌ 18ರವರೆಗೆ ಕಾಲಾವಕಾಶ ಇದೆ.

ವಿ.ವಿಗೆ ವಾರ್ಷಿಕ ₹ 30 ಲಕ್ಷ ವೆಚ್ಚ

ಪತ್ರಿಕೋದ್ಯಮ ವಿಭಾಗದಲ್ಲಿ ವಿದ್ಯಾರ್ಥಿಗಳು ಕಡಿಮೆ ಇದ್ದು ಐವರು ಅತಿಥಿ ಉಪನ್ಯಾಸಕರ ವೇತನ ಹಾಗೂ ನಿರ್ವಹಣೆಗೆ ವಾರ್ಷಿಕ ₹ 30 ಲಕ್ಷ ವೆಚ್ಚವಾಗುತ್ತದೆ. ಕನಿಷ್ಠ 10 ವಿದ್ಯಾರ್ಥಿಗಳು ಇಲ್ಲದಿದ್ದರೂ ಏಕೆ ತರಗತಿ ನಡೆಸುತ್ತಿದ್ದೀರಿ ಎಂಬ ಪ್ರಶ್ನೆಯನ್ನು ಲೆಕ್ಕಪರಿಶೋಧಕರು ಕೇಳುತ್ತಿದ್ದಾರೆ ಎಂದು ಉತ್ತರ ವಿಶ್ವವಿದ್ಯಾಲಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!