ಕಲಬುರಗಿ.11.ಫೆ.25:- ಅರಣ್ಯ ಇಲಾಖೆಯ ವೀಕ್ಷಕ ಗ್ರೂಪ್ ‘ಡಿ’ ವೃಂದದ ಹುದ್ದೆಗಾಗಿ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿನ ಅಂಕಗಳನ್ನು ತಿದ್ದಿ ನಕಲಿ ಅಂಕಪಟ್ಟಿ ಸಲ್ಲಿಸಿದ ಪ್ರಕರಣದಲ್ಲಿ ಆಪಾದಿತನ ದಾಖಲಾತಿಗಳ ಪರಿಶೀಲನೆಯಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದು ಮೇಲ್ನೋಟಕ್ಕೆ ಕಂಡುಬಂದಿದೆ.
ಅರಣ್ಯ ವೀಕ್ಷಕ ಗ್ರೂಪ್ ‘ಡಿ’ ವೃಂದದ 23 ಹುದ್ದೆಗಳ ನೇರ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಎಸ್‌ಎಸ್‌ಎಲ್‌ಸಿಯಲ್ಲಿ 318 ಅಂಕ ಗಳಿಸಿದ್ದ ಬೀರಪ್ಪ ಶಿವಪುತ್ರ, ತಾನು 605 ಅಂಕ ಪಡೆದಿದ್ದಾಗಿ ನಕಲಿ ಅಂಕಪಟ್ಟಿ ಸಲ್ಲಿಸಿದ್ದ.
ಸಾಕ್ಷರತಾ ಇಲಾಖೆಯ ಕಲಬುರಗಿ ವಿಭಾಗದ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು 318 ಅಂಕ ಪಡೆದಿದ್ದಾಗಿ ತಿಳಿಸಿದ್ದರೂ ನೇಮಕಾತಿಯ ಅಂತಿಮ ಆಯ್ಕೆ ಪಟ್ಟಿಯಲ್ಲಿ ಬೀರಪ್ಪ ಅವರು ಸ್ಥಾನ ಪಡೆದಿದ್ದು ಅಚ್ಚರಿ ಮೂಡಿಸಿತ್ತು.
ನೇಮಕಾತಿಯಲ್ಲಿ ಬೀರಪ್ಪ ಹೊರತುಪಡಿಸಿ ಉಳಿದವರು ಗರಿಷ್ಠ 621ರಿಂದ ಕನಿಷ್ಠ 585 ಅಂಕಗಳು ಗಳಿಸಿದ್ದಾರೆ. 318 ಅಂಕ ಪಡೆದು ನೇಮಕವಾದ ಬೀರಪ್ಪ ಪ್ರೊಬೇಷನರಿ ಅವಧಿಯ ತರಬೇತಿಗೆ ಹೋಗಿದ್ದು ಹೇಗೆ? ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಯು 2024ರ ಮೇ ತಿಂಗಳಲ್ಲಿ ಬೀರಪ್ಪನ ಎಸ್‌ಎಸ್‌ಎಲ್‌ಸಿ ಅಂಕ 318 ಇದೆ ಎಂದು ವರದಿ ಸಲ್ಲಿಸಿತ್ತು.
ದಾಖಲಾತಿ ಪರಿಶೀಲನೆ ವೇಳೆ ಅಧಿಕಾರಿಗಳು ಇದನ್ನು ಗಮನಿಸಿರಲಿಲ್ಲವೇ? ಅಥವಾ ಕಣ್ಮುಚ್ಚಿಕೊಂಡು ಪರಿಶೀಲಿಸಿದ್ದರೆ ಎಂಬ ಪ್ರಶ್ನೆಗಳು ಹುದ್ದೆಯ ಆಕಾಂಕ್ಷಿಗಳಲ್ಲಿ ಮೂಡಿವೆ.
ಆಯ್ಕೆಯಾದ ಅಭ್ಯರ್ಥಿಗಳ ಹೆಸರು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ನೋಂದಣಿ ಸಂಖ್ಯೆ ಹಾಗೂ ಪಾಸಾದ ವರ್ಷವನ್ನು ನಮೂದಿಸಿದ ಪತ್ರವನ್ನು ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಕಳುಹಿಸಿದ್ದೆವು.
ಮೇ ತಿಂಗಳಲ್ಲಿ ಮಂಡಳಿಯು ತನ್ನ ವರದಿ ನೀಡಿತ್ತು. ಅದಕ್ಕೂ ಮೊದಲೇ ಮಾರ್ಚ್ ತಿಂಗಳಲ್ಲಿಯೇ ಅಭ್ಯರ್ಥಿಗಳ ಆಯ್ಕೆಯ ಅಂತಿಮ ಪಟ್ಟಿ ಪ್ರಕಟವಾಗಿತ್ತು’ ಎನ್ನುತ್ತಾರೆ ಹೆಸರು ಬಹಿರಂಗಪಡಿಸಲು ಇಚ್ಛಿಸದ ಅರಣ್ಯ ಇಲಾಖೆಯ ಅಧಿಕಾರಿ.
‘ಈಗಾಗಲೇ ಅಂತಿಮ ಪಟ್ಟಿ ಬಂದಿದ್ದರಿಂದ ದಾಖಲಾತಿಗಳ ಪರಿಶೀಲನೆಯಲ್ಲಿ ಕಣ್ತಪ್ಪಿನಿಂದ ನಕಲಿ ಅಂಕ ತೋರಿಸಿದ್ದ ಅಭ್ಯರ್ಥಿಯೂ ಆಯ್ಕೆಯಾಗಿದ್ದಾರೆ. 23 ಅಭ್ಯರ್ಥಿಗಳೊಂದಿಗೆ ಬೀರಪ್ಪ ಸಹ ಆಗಸ್ಟ್ ತಿಂಗಳಲ್ಲಿ ತರಬೇತಿಗಾಗಿ ಬೀದರ್‌ಗೆ ತೆರಳಿದ್ದ. ನಕಲಿ ಅಂಕಪಟ್ಟಿ ಕೊಟ್ಟಿದ್ದು ಗೊತ್ತಾಗುತ್ತಿದ್ದಂತೆ ಆತನ ವಿರುದ್ಧ ಎಫ್‌ಐಆರ್ ದಾಖಲಿಸಿದ್ದೇವೆ’ ಎಂದರು.
ಬಹಿರಂಗವಾಗಿದ್ದು ಹೇಗೆ ?: ‘ನೇಮಕಾತಿಯಲ್ಲಿ ಶಂಕೆ ವ್ಯಕ್ತಪಡಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಮತ್ತು ಮೌಲ್ಯನಿರ್ಣಯ ಮಂಡಳಿಗೆ ಆರ್‌ಟಿಐ ಹಾಕಿದ್ದೆ.
ಅಂಕಪಟ್ಟಿ ಪರಿಶೀಲಿಸಿ ಅರಣ್ಯ ಇಲಾಖೆ ನೀಡಿದ್ದ ವರದಿಯ ಅಂಕಗಳು ಹಾಗೂ ಬೀರಪ್ಪ ಓದಿದ್ದ ಶಾಲೆಯ ಮೂಲ ಅಂಕಪಟ್ಟಿಯನ್ನು ಪರಿಶೀಲಿಸಿದಾಗ ಮಾರ್ಕ್ಸ್ ಕಾರ್ಡ್ ತಿದ್ದಿದ್ದು ಗೊತ್ತಾಯಿತು’ ಎಂದು ಅರ್ಜಿದಾರ, ಜಯ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾ ಅಧ್ಯಕ್ಷ ಬಸವರಾಜ ಎಸ್. ಕೋರಳ್ಳಿ ತಿಳಿಸಿದರು.
‘ಹಲವು ಬಾರಿ ದೂರು ಕೊಟ್ಟಿದ್ದರೂ ಈ ಬಗ್ಗೆ ಕ್ರಮ ತೆಗೆದುಕೊಳ್ಳಲಿಲ್ಲ. ಅರಣ್ಯ ಇಲಾಖೆಯ ಮೇಲಧಿಕಾರಿಗಳಿಗೆ ದೂರು ಕೊಟ್ಟ ಬಳಿಕ ಈಗ ಎಫ್‌ಐಆರ್ ದಾಖಲಿಸಿದ್ದಾರೆ.
ನಕಲಿ ಅಂಕ ಪಟ್ಟಿ ಸಿದ್ಧಪಡಿಸುವ ಜಾಲ ಜಿಲ್ಲೆಯಲ್ಲಿ 2010ರಿಂದಲೇ ಸಕ್ರಿಯವಾಗಿದೆ. ಗ್ರೂಪ್ ‘ಡಿ’ ಹುದ್ದೆಗಾಗಿ 600ಕ್ಕೂ ಹೆಚ್ಚು ಅಂಕ ತಿದ್ದಿ ಅರ್ಹರನ್ನು ವಂಚಿಸಲಾಗುತ್ತಿದೆ’ ಎಂದು ದೂರಿದರು.
ಆಯ್ಕೆ ರದ್ದು ಮಾಡಿ ಅಧಿಕಾರಿಗಳ ತನಿಖೆ’
‘ನಕಲಿ ಅಂಕಪಟ್ಟಿ ಕೊಟ್ಟು ನೇಮಕವಾದ ಅಭ್ಯರ್ಥಿಗೆ ನೋಟಿಸ್ ಕೊಡಲಾಗಿದ್ದು ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಭ್ಯರ್ಥಿಯ ಆಯ್ಕೆಯನ್ನು ರದ್ದು ಮಾಡುತ್ತೇವೆ. ಆ ಬಳಿಕ ದಾಖಲಾತಿಗಳ ಪರಿಶೀಲನೆಯಲ್ಲಿ ತಪ್ಪು ಎಸಗಿದವರ ಬಗ್ಗೆಯೂ ತನಿಖೆ ನಡೆಸಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್ ಕುಮಾರ್ ಎಸ್. ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಂತಹ ತಪ್ಪು ಆಗಬಾರದಿತ್ತು ಆಗಿದೆ. ಈ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವುದಿಲ್ಲ. ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುತ್ತೇವೆ’ ಎಂದರು.
-ಮೋಹನಕುಮಾರ ಹಂಚಾಟ್ಟೆ ಸಹಾಯಕ ನಿರ್ದೇಶಕರು ಸಾಕ್ಷರತಾ ಇಲಾಖೆಯ ಕಲಬುರಗಿಯ ಪರೀಕ್ಷೆ ವಿಭಾಗಇಲಾಖೆಯವರು ಆಯ್ಕೆಯಾದ ಅಭ್ಯರ್ಥಿಗಳ ಮಾಹಿತಿಯನ್ನು ಆನ್‌ಲೈನ್‌ನಲ್ಲಿ ಕಳುಹಿಸುತ್ತಾರೆ.
ನಮ್ಮಲ್ಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶದ ಶೀಟ್ ನೋಡಿ ಪರಿಶೀಲಿಸಿ ನಕಲಿ ಅಂಕ ಕಂಡು ಬಂದಲ್ಲಿ ಅಂಕಗಳು ಅನಧಿಕೃತ ಎಂದು ನಮೂದಿಸುತ್ತೇವೆ.