ಬೀದರ.19.ಏಪ್ರಿಲ್.25:- ಬೀದರದ APMC ಯಾರ್ಡ್, ಎಲ್ಲರಿಗೂ ಗೊತ್ತಿರುವಂತೆ, ನಾವು “ಗಾಂಧಿ ಗಂಜ” ಎಂದು ಕರೆಯುತ್ತೇವೆ. ಇದು ಬೀದರದ ಪ್ರಮುಖ ಕೃಷಿ ಮಾರುಕಟ್ಟೆ ಹಾಗೂ ಬೀದರನ ವಾಣಿಜ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದು, ಸುಮಾರು 30 ಎಕರೆ ಭೂಮಿಯಲ್ಲಿ ಸ್ಥಾಪಿತವಾಗಿದೆ. ಈ ಮಾರುಕಟ್ಟೆಗೆ ಇಂದಿಗೆ ಸುಮಾರು 70 ವರ್ಷಗಳ ಇತಿಹಾಸವಿದೆ.
ಆದಾಗಿನ ಅವಧಿಯಲ್ಲಿ ಇದ್ದ ಕೃಷಿ ಉತ್ಪನ್ನಗಳ ಆವಕ ಮತ್ತು ವ್ಯಾಪಾರಸ್ಥರ ಸಂಖ್ಯೆಯು, ಇಂದಿನ ಹೆಚ್ಚಿನ ವ್ಯಾಪಾರ ಚಟುವಟಿಕೆಗಳಿಗೆ ಹೋಲಿಕೆಯಾಗುವಂತಿಲ್ಲ. ಈ ದಿನಗಳಲ್ಲಿ ಮಾರುಕಟ್ಟೆಯ ವ್ಯಾಪ್ತಿ ಹೆಚ್ಚಾಗಿರುವುದರಿಂದ, ಸುಗ್ಗಿ ಕಾಲದಲ್ಲಿ ದೈನಂದಿನ ವ್ಯವಹಾರ ಸಮಯದಲ್ಲಿ ಇಡೀ ಪ್ರದೇಶ ತುಂಬಾ ಇಕ್ಕಟ್ಟಾದ ಸ್ಥಳವಾಗಿ ಮಾರ್ಪಡುತ್ತದೆ. ಕೆಲವೊಮ್ಮೆ ನಡೆಯಲು ಕೂಡ ಜಾಗವಿಲ್ಲದಂತಹ ಪರಿಸ್ಥಿತಿ ಎದುರಾಗುತ್ತಿದೆ.
ಈ ಹಿನ್ನೆಲೆಯಲ್ಲಿ, ಹೊಸ ಮಾದರಿಯ ಮಾರುಕಟ್ಟೆ ಅಭಿವೃದ್ಧಿಪಡಿಸುವ ಅಗತ್ಯತೆ ನಿಸ್ಸಂದೇಹವಾಗಿ ಬಹಳ ತೀವ್ರವಾಗಿದೆ. ಕಳೆದ ಒಂದು ದಶಕದಿಂದ ಈ ನಿಟ್ಟಿನಲ್ಲಿ ನಾವು ನಿರಂತರವಾಗಿ ಪ್ರಯತ್ನಿಸುತ್ತ, ಅವಶ್ಯಕ ಕ್ರಮಗಳು ಕೈಗೊಳ್ಳಬೇಕೆಂದು ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ.
ನೆನ್ನೆ, ಈ ವಿಷಯವನ್ನು ನಾನು ಮತ್ತೊಮ್ಮೆ ಬೀದರ ಉಸ್ತುವಾರಿ ಮಂತ್ರಿಗಳಾದ ಶ್ರೀ ಈಶ್ವರ ಖಂಡ್ರೆಯವರ ಸಮ್ಮುಖದಲ್ಲಿ ಬೀದರಗೆ ಭೇಟಿಕೊಟ್ಟ ಗೌರವಾನ್ವಿತ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರಿಗೆ ಹಾಗು ಗೌರವಾನ್ವಿತ ಉಪ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ.ಶಿವಕುಮಾರ ಅವರ ಗಮನಕ್ಕೆ ತಂದು, ಬೀದರಕ್ಕೆ ಹೊಸ ಮಾರುಕಟ್ಟೆಯ ಅಗತ್ಯತೆ ಹಾಗೂ ಅವಶ್ಯಕತೆಯ ಕುರಿತು ವಿವರವಾಗಿ ಪ್ರಸ್ತಾವನೆ ಸಲ್ಲಿಸಿದ್ದೇನೆ.
ಇನ್ನಾದರೂ ನೂತನ ಮತ್ತು ಸುಸಜ್ಜಿತ ಮಾರುಕಟ್ಟೆ ಸ್ಥಾಪನೆಯ ನಮ್ಮ ಬಹುಕಾಲದ ಕನಸು ನನಸಾಗಿ, ಈ ವರ್ಷ ಬೀದರನ ರೈತರಿಗೆ ಹಾಗು ವ್ಯಾಪಾರಸ್ಥರಿಗೆ ಅನುಕೂಲವಾಗಲಿ ಎಂಬ ಆಶಯ ಹೊಂದಿದ್ದೇವೆ.
