04/08/2025 3:11 AM

Translate Language

Home » ಲೈವ್ ನ್ಯೂಸ್ » ಬಾಲ್ಯ ವಿವಾಹ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಶಿವಾನಂದ

ಬಾಲ್ಯ ವಿವಾಹ ಮುಕ್ತ ಕೊಪ್ಪಳ ಜಿಲ್ಲೆಯನ್ನಾಗಿಸಲು ಕೈಜೋಡಿಸಿ: ಶಿವಾನಂದ

Facebook
X
WhatsApp
Telegram

ಕೊಪ್ಪಳ.01.ಆಗಸ್ಟ್.25: ಬಾಲ್ಯವಿವಾಹವು ಒಂದು ಶಿಕ್ಷಾರ್ಹ ಅಪರಾಧವಾಗಿದ್ದು, ಇದರ ನಿರ್ಮೂಲನೆಗೆ ಮತ್ತು ಕೊಪ್ಪಳವನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿದ್ಯಾರ್ಥಿಗಳು ನಾಯಕತ್ವ ವಹಿಸಿಕೊಂಡು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಕೈಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವ್ಹಿ.ಪಿ. ಹೇಳಿದರು.


ಅವರು ಬುಧವಾರ ಯಲಬುರ್ಗಾ ಸರಕಾರಿ ಬಾಲಕಿಯ ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯಲಬುರ್ಗಾ ತಾಲೂಕಾ ಆರೋಗ್ಯಾಧಿಕಾರಿಗಳ ಕಛೇರಿ ಹಾಗೂ ಸರಕಾರಿ ಬಾಲಕಿಯ ಪದವಿಪೂರ್ವ ಕಾಲೇಜು ಸಂಯುಕ್ತಾಶ್ರಯದಲ್ಲ್ಲಿ ಹಮ್ಮಿಕೊಂಡಿದ್ದ ಬಾಲ್ಯವಿವಾಹ ನಿಷೇಧ” ಹಾಗೂ “ಹದಿ-ಹರೆಯದವರ ಆರೋಗ್ಯ ರಕ್ಷಣೆ” ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಲ್ಯ ವಿವಾಹ ನಮ್ಮ ಸಮಾಜದ ಒಂದು ಸವಾಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬ ನಾಗರಿಕರು ಜಾಗೃತರಾಗಿ ಹದಿ-ಹರೆದವರಿಗೆ ಮತ್ತು ಪಾಲಕರಿಗೆ ಅರಿವು ಮೂಡಿಸಬೇಕಾಗಿದೆ. ಬಾಲ್ಯವಿವಾಹ ಎಂದರೆ ಯಾವುದೇ 18 ವರ್ಷದೊಳಗಿನ ಹೆಣ್ಣುಮಕ್ಕಳಿಗೆ ಅಥವಾ 21 ವರ್ಷದೊಳಗಿನ ಗಂಡುಮಕ್ಕಳಿಗೆ ಮದುವೆ ಮಾಡುವುದಕ್ಕೆ ಬಾಲ್ಯವಿವಾಹ ಎಂದು ಕರೆಯುತ್ತಾರೆ.

ಬಾಲ್ಯವಿವಾಹಕ್ಕೆ ಕಾರಣಗಳೆಂದರೆ ಮೂಡನಂಬಿಕೆ, ಅನಕ್ಷರತೆ, ಬಡತನ, ಬಾಲ್ಯವಿವಾಹದ ದುಷ್ಪರಿಣಾದ ಬಗ್ಗೆ ಅರಿವು ಇಲ್ಲದೇ ಇರುವುದು, ರಕ್ತ ಸಂಬoಧವನ್ನು ಉಳಿಸಿಕೊಳ್ಳುವುದು, ಕುಟುಂಬ ಆಸ್ತಿಯನ್ನು ಉಳಿಸಿಕೊಳ್ಳುವುದು, ಪಾಲಕರು ಮದುವೆ ಮಾಡಿ ತಮ್ಮ ಜವಾಬ್ದಾರಿಯನ್ನು ಕಳೆದುಕೊಳ್ಳುವುದು, ಸಾಮೂಹಿಕ ವಿವಾಹದಲ್ಲಿ ಕಡಿಮೆ ಖರ್ಚು ಆಗುತ್ತದೆ ಎಂಬ ಬಾವನೆ, ವೃದ್ಧರು ಹಾಗೂ ಅನಾರೋಗ್ಯದ ಹಿರಿಯರ ಆಸೆ ಈಡೆರಿಸುವ ಉದ್ದೇಶದಿಂದ ಬಾಲ್ಯವಿವಾಹ ಮಾಡುತ್ತಾರೆ. ಬಾಲ್ಯವಿವಾಹ ಮಾಡುವುದರಿಂದ ಹೆಣ್ಣುಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ದುಷ್ಪಪರಿಣಾಮ ಬೀರುತ್ತದೆ ಎಂದರು.

ಬಾಲ್ಯವಿವಾಹ ಮಾಡುವುದರಿಂದ ಇಬ್ಬರಿಗೂ ವಯಸ್ಸಿಗೆ ಮೀರಿದ ಜವಾಬ್ದಾರಿ ಹೊರಿಸಿದಂತಾಗುತ್ತದೆ. ಅಪ್ರಾಪ್ತ ವಯಸ್ಸಿನಲ್ಲಿ ಗರ್ಭಿಣಿಯಾಗುವುದರಿಂದ ಗರ್ಭಕೋಶದ ಬೆಳವಣಿಗೆ ಪೂರ್ಣಗೊಳ್ಳದೆ ಹೆರಿಗೆ ಸಮಯದಲ್ಲಿ ಜೀವಕ್ಕೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ. ವಿಕಲಾಂಗ ಮಕ್ಕಳ ಜನನ, ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಹಾಗೂ ಬಲತ್ಕಾರಕ್ಕೆ ಒಳಗಾಗುತ್ತಾರೆ. ಲೈಂಗಿಕ ಖಾಯಿಲೆಗಳಿಂದ ಹೆಚ್.ಐ.ವಿ ಅಥವಾ ಏಡ್ಸ್ ರೋಗಕ್ಕೆ ಗುರಿಯಾಗುವ ಸಾಧ್ಯತೆ ಇರುತ್ತದೆ ಹಾಗೂ ರಕ್ತಹೀನತೆ ಉಂಟಾಗುತ್ತದೆ ಮತ್ತು ಕಡಿಮೆ ತೂಕದ ಮಗುವಿನ ಜನನವಾಗುವ ಸಾಧ್ಯತೆ ಇರುತ್ತದೆ.

ಶಿಶುಗಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತದೆ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ತಮ್ಮ ತಮ್ಮ ಗ್ರಾಮಗಳಲ್ಲಿ, ವಾರ್ಡ್ಗಳಲ್ಲಿ ಬಾಲ್ಯವಿವಾಹ ನಿಷೇಧ ಕುರಿತು, ನಿರಂತರವಾಗಿ ಪಾಲಕರಿಗೆ ಅರಿವು ಮೂಡಿಸಬೇಕು. ಬಾಲ್ಯವಿವಾಹ ನಿಷೇಧ ಕಾಯ್ದೆ-2006ರ ಪ್ರಕಾರ ಬಾಲ್ಯವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ. ಇದನ್ನು ಮಾಡುವವರಿಗೆ ಮತ್ತು ಮಾಡಿಸುವವರಿಗೆ ಜೈಲುಶಿಕ್ಷೆ ಮತ್ತು 1ಲಕ್ಷ ರೂ. ವರೆಗೆ ದಂಡ ವಿಧಿಸಲಾಗುತ್ತದೆ. ಕೊಪ್ಪಳ ಜಿಲ್ಲೆಯನ್ನು ಬಾಲ್ಯ ವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲರು ಸಹಕರಿಸಬೇಕು. ಸಹಾಯವಾಣಿ ಸಂಖ್ಯೆ 1098 ಗೆ ಕರೆಮಾಡಿ ಬಾಲ್ಯ ವಿವಾಹ ನಿಯಂತ್ರಣ ಮಾಡುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಆರೋಗ್ಯ ನೀರಿಕ್ಷಣಾಧಿಕಾರಿ ರೇತು ನಾಯ್ಕ್ ಅವರು ಸಾಂಕ್ರಾಮಿಕ ರೋಗಗಳಾದ ಕ್ಷಯರೋಗ ನಿರ್ಮೂಲನೆ, ಕುಷ್ಠರೋಗ ನಿರ್ಮೂಲನೆ, ಡೆಂಗ್ಯೂ, ಚಿಕನ್‌ಗುನ್ಯಾ, ಮಲೇರಿಯಾ, ಮೆದುಳುಜ್ವರ, ಆನೆಕಾಲುರೋಗ ನಿಯಂತ್ರಣ ಕುರಿತು ಹಾಗೂ ಅಸಾಂಕ್ರಾಮಿಕ ರೋಗಗಳ ನಿಯಂತ್ರಣ ಜನಸಂಖ್ಯಾ ನಿಯಂತ್ರಣ ಕುರಿತು ವಿವರವಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಯಲಬುರ್ಗಾ ಸರಕಾರಿ ಬಾಲಕಿಯ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಸ್ ಹಿರೇಮಠ ಅವರು ಮಾತನಾಡಿ, ಬಾಲ್ಯ ವಿವಾಹ ತಡೆಗಟ್ಟುವುದು ಪ್ರತಿಯೋಬ್ಬ ಪ್ರಜೇಯ ಜವಾಬ್ದಾರಿಯಾಗಿದೆ. ಇಲಾಖೆಗಳು ಜಾಗೃತಿ ಮೂಡಿಸಿದರೆ ಸಾಲದು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಬಾಲ್ಯವಿವಾಹ ನಿಷೇಧಕ್ಕೆ ಕೈಜೊಡಿಸಬೇಕು. ಆರೋಗ್ಯ ಇಲಾಖೆಯ ಜಾಗೃತಿ ಕಾರ್ಯಕ್ರಮಗಳು ಬಹಳಷ್ಟು ಉಪಯುಕ್ತವಾಗಿವೆ. ಇದರ ಸದುಪಯೋಗ ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.
ಆರ್.ಕೆ.ಎಸ್.ಕೆ ಕಾರ್ಯಕ್ರಮದ ಆಪ್ತಸಮಾಲೋಚಕ ಶರಣಪ್ಪ ಉಪ್ಪಾರ ಅವರು, ಹದಿ-ಹರೆಯದವರ ಆರೋಗ್ಯ ರಕ್ಷಣೆ ಮತ್ತು ಸ್ನೇಹ ಕ್ಲಿನಿಕ್ ಕುರಿತು ವಿವರವಾಗಿ ಮಾತನಾಡಿದರು.

ವಿದ್ಯಾರ್ಥಿಗಳು ಕಾರ್ಯಕ್ರಮ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಅಥಿತಿ ಸಹ ಉಪನ್ಯಾಸಕರು, ಆಶಾ ಕಾರ್ಯಕರ್ತೆಯರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!