Home » ಲೈವ್ ನ್ಯೂಸ್ » ಪಿಯು ಪ್ರಾಚಾರ್ಯ, ಉಪನ್ಯಾಸಕರ ಮೌನ ಪ್ರತಿಭಟನೆ

ಪಿಯು ಪ್ರಾಚಾರ್ಯ, ಉಪನ್ಯಾಸಕರ ಮೌನ ಪ್ರತಿಭಟನೆ

Facebook
X
WhatsApp
Telegram

ಚಿತ್ರದುರ್ಗ.13.ಮಾರ್ಚ್.26: ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣವನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ವರ್ಗಾಯಿಸುವ ಪ್ರಸ್ತಾವನೆಯನ್ನು ಹಿಂಪಡೆಯುವಂತೆ ಹಾಗೂ ಇತರೆ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಸಂಘದ ಸದಸ್ಯರು ಗುರುವಾರ ಮೌನವಾಗಿ ಪ್ರತಿಭಟನೆ ಮಾಡಲಾಗಿದೆ.

ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಕಚೇರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ರಾಜ್ಯದಲ್ಲಿ 1,317 ಸರ್ಕಾರಿ ಪದವಿ ಪೂರ್ವ ಕಾಲೇಜುಗಳು ಹಾಗೂ 829 ಅನುದಾನಿತ ಪದವಿ ಪೂರ್ವ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಪ್ರತಿ ಜಿಲ್ಲೆಯ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (ಡಿಡಿಪಿಯು) ಆಯಾ ಜಿಲ್ಲಾ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಕೆಲಸ ಕಾರ್ಯ ನಿರ್ವಹಿಸುತ್ತಿದ್ದಾರೆ.

ಆ ಮೂಲಕ ಗುಣಮಟ್ಟದ ಶಿಕ್ಷಣ, ಪರಿಣಾಮಕಾರಿ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಕರ್ನಾಟಕ ಸಿಇಟಿ ಅರ್ಹತಾ ಪರೀಕ್ಷೆಗಳ ಆಯೋಜನೆ ದೇಶದ ಇತರೆ ರಾಜ್ಯಗಳಿಗೆ ಮಾದರಿಯಾಗಿದೆ.

ಒಂದು ವೇಳೆ ಇಲಾಖೆಯ ಆಡಳಿತ, ಶೈಕ್ಷಣಿಕ, ಮಾನ್ಯತೆ ನವೀಕರಣ, ಮೂಲ ಸೌಕರ್ಯ ಒದಗಿಸುವ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಸಿಇಒಗೆ ನೀಡಿದರೆ ಇಲಾಖೆಯ ಅಸ್ಮಿತೆಗೆ ಧಕ್ಕೆ ಆಗಲಿದೆ ಎಂದು ಪ್ರತಿಭಟನಕಾರರು ಆರೋಪಿಸಿದರು.

ಕಾಲೇಜುಗಳಲ್ಲಿ ಖಾಲಿ ಇರುವ ಪ್ರಾಂಶುಪಾಲರ ಹಾಗೂ ಉಪನ್ಯಾಸಕರ ಹುದ್ದೆಗಳನ್ನು ತುಂಬದೆ ಇದ್ದರೆ ಆ ಕಾಲೇಜುಗಳಿಗೆ ಯಾವೊಬ್ಬ ವಿದ್ಯಾರ್ಥಿ ಪ್ರವೇಶಾತಿ ಹೊಂದದೆ ಆ ಕಾಲೇಜನ್ನು ಮುಚ್ಚಬೇಕಾಗುತ್ತದೆ.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ, ಪ್ರಾಂಶುಪಾಲರ ವರ್ಗಾವಣೆ ಹಾಗೂ ಪದೋನ್ನತಿ ಬಡ್ತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಸಂಖ್ಯೆ ಪರಿಗಣಿಸದೆ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಿದಾಗ ಮಾತ್ರ ಸರ್ಕಾರಿ ಕಾಲೇಜುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

‘ನಮ್ಮ ನ್ಯಾಯಯುತ ಎಲ್ಲಾ ಬೇಡಿಕೆಗಳು ಈಡೇರದಿದ್ದರೆ ದ್ವಿತೀಯ ಪಿಯು ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನ ಬಹಿಷ್ಕರಿಸಿ ರಾಜ್ಯದ ಎಲ್ಲಾ ಕಾಲೇಜುಗಳ ಪ್ರಾಂಶುಪಾಲರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಮೂರು ವರ್ಷಗಳಿಂದ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ, ಪರೀಕ್ಷಾ ಸಂಭಾವನೆ ಪರಿಷ್ಕರಿಸಿಲ್ಲ. ಅಲ್ಲದೇ ಕಳೆದ ವರ್ಷದ ಬಾಕಿ ಇರುವ ಸಂಭಾವನೆಯನ್ನು ಖಾಸಗಿ ಹಾಗೂ ಅತಿಥಿ ಉಪನ್ಯಾಸಕರಿಗೆ ಈವರೆಗೂ ವಿತರಿಸಿಲ್ಲ ಎಂದು ಆರೋಪಿಸಿದರು. ಕಾರ್ಯಭಾರ ಕೊರತೆ ಇರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶವನ್ನು ಹಿಂಪಡೆದು ಸಮೀಪದ ಸರ್ಕಾರಿ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಈ ಕೂಡಲೇ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ರಾಜೇಶ್ ಪಿ.ಎಂ.ಜಿ, ಉಪನ್ಯಾಸಕರ ಸಂಘದ ಅಧ್ಯಕ್ಷ ಬಿ.ಆರ್.ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ಎ.ಕಾಂತರಾಜು, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎ.ನಾಗರಾಜ್, ಸಣ್ಣಪಾಲಯ್ಯ, ಬಿ.ಕೃಷ್ಣಪ್ಪ, ಟಿ.ದುರುಗಪ್ಪ, ಎಸ್.ದೇವೆಂದ್ರಪ್ಪ, ಡಿ.ಎಸ್.ವೇದಮೂರ್ತಿ, ಕೆ.ನಾಗರಾಜಪ್ಪ, ಸಿ.ಕಲ್ಲಪ್ಪ,ರಾಜಭಕ್ಷಿ, ಎಚ್.ಎಸ್.ವಸಂತಕುಮಾರ್, ಪಿ.ಎ.ಶಿವಕುಮಾರ್, ಕಾಮಾಕ್ಷಿ, ಯಶೋದ ಇದ್ದರು.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology