ಹೊಸ ದೆಹಲಿ.10.ಮೇ.25:- ಭಾರತ-ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ ಈ ದಾಳಿಯಲ್ಲಿ ಆಂಧ್ರಪ್ರದೇಶದ ಸೈನಿಕ ಮುರಳಿ ನಾಯಕ್ ಈಗಾಗಲೇ ಹುತಾತ್ಮರಾಗಿದ್ದಾರೆ.ಜಮ್ಮುವಿನಲ್ಲಿ ಪಾಕಿಸ್ತಾನದ ಗುಂಡಿನ ದಾಳಿಗೆ ಯೋಧ ಸಚಿನ್ ಯಾದವರಾವ್ ವನಂಜೆ (30) ಹುತಾತ್ಮರಾದರು.
ಸಚಿನ್ ಯಾದವರಾವ್ ವನಂಜೆಯವರ ಊರು ಮಹಾರಾಷ್ಟ್ರ-ತೆಲಂಗಾಣ ಗಡಿಯಲ್ಲಿರುವ ನಾಂದೇಡ್ ಜಿಲ್ಲೆಯ ತಮ್ಲೂರು.
ಸಚಿನ್ ಯಾದವ್ ರಾವ್ ವನಂಜೆ ಅವರ ಪಾರ್ಥಿವ ಶರೀರವನ್ನು ಇಂದು ಅವರ ಹುಟ್ಟೂರಿಗೆ ತರುವ ಸಾಧ್ಯತೆಯಿದೆ. ಆತನೊಂದಿಗೆ ಕೆಲವು ಜನ ಸಹ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
25 ವರ್ಷದ ಮುರುಳಿ ನಾಯಕ್ ಡಿಸೆಂಬರ್ 2022ರಲ್ಲಿ ಸೇನೆಗೆ ಸೇರಿದ್ದರು ಜೊತೆಗೆ AV (OPR) ಟ್ರೇಡ್ ಅಡಿಯಲ್ಲಿ ಸೈನಿಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಬಡತನದ ಹಿನ್ನೆಲೆಯಿಂದ ಬಂದ ಇವರು ಮೂಲತಃ ಆಂಧ್ರಪ್ರದೇಶ ಸತ್ಯಸಾಯಿ ಜಿಲ್ಲೆಯ ಬುಡಕಟ್ಟು ಹಳ್ಳಿಯೊಂದರ ಬಡ ಕುಟುಂಬದಲ್ಲಿ ಜನಿಸಿದವರು. ಇವರ ತಂದೆ ಎಂ. ಶ್ರೀರಾಮ್ ನಾಯಕ್ ಮತ್ತು ತಾಯಿ ಎಂ. ಜ್ಯೋತಿಬಾಯಿ ಇಬ್ಬರೂ ದಿನಗೂಲಿ ಕಾರ್ಮಿಕರಾಗಿದ್ದರು. ಯೋಧ ಮುರುಳಿ ನಾಯಕ್ ಅವರ ಕುಟುಂಬದ ಜವಾಬ್ದಾರಿಯನ್ನು ಹೊತ್ತು ತಂದೆ ತಾಯಿಯರ ಕಷ್ಟದಲ್ಲಿಯೂ ಭಾಗಿಯಾಗಿದ್ದನು. ಆದರೆ ಈಗ ಮಗನ ಅಗಲುವಿಕೆಯಿಂದ ಕುಟುಂಬಕ್ಕೆ ಜೊತೆಗೆ ಅವರ ಗ್ರಾಮಕ್ಕೆ ಅಪಾರ ನೋವುಂಟಾಗಿದೆ.
ಈ ದುರಂತ ಸುದ್ದಿ ತಿಳಿಯುತ್ತಿದ್ದಂತೆಯೇ ನಾಯಕರು ಮತ್ತು ಗ್ರಾಮಸ್ಥರಿಂದ ಸಂತಾಪದ ಅಲೆಯೊಂದು ಹರಿದು ಬಂದಿದೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ‘ದೇಶ ರಕ್ಷಣೆಯಲ್ಲಿ ಶ್ರೀ ಸತ್ಯಸಾಯಿ ಜಿಲ್ಲೆಯ ಪೆನುಕೊಂಡ ವಿಧಾನಸಭಾ ಕ್ಷೇತ್ರದ ಗೋರಂಟ್ಲಾ ಮಂಡಲದ ಮುರಳಿ ನಾಯಕ್ ಎಂಬ ಸೈನಿಕನ ಸಾವು ದುಃಖಕರವಾಗಿದೆ.
ರಾಷ್ಟ್ರಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮ ಮುರಳಿ ನಾಯಕ್ ಅವರಿಗೆ ಶ್ರದ್ಧಾಂಜಲಿಗಳು. ಅವರ ಕುಟುಂಬ ಸದಸ್ಯರಿಗೆ ನನ್ನ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ’ ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಮುರಳಿ ನಾಯಕ್ ಪಾರ್ಥಿವ ಶರೀರ ಇಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಧ್ಯಾಹ್ನ ಬರಲಿದ್ದು, ಚಿಕ್ಕಬಳ್ಳಾಪುರ ಮಾರ್ಗವಾಗಿಯೇ ಮೃತ ಪಾರ್ಥಿವ ಶರೀರವನ್ನ ಕೊಂಡೊಯ್ಯಲಾಗುತ್ತದೆ.
ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕನಿಗೆ ಶ್ರದ್ಧಾಂಜಲಿಯಾಗಿ ಗೋರಂಟ್ಲದ ಪ್ರಮುಖ ವೃತ್ತದಲ್ಲಿ ಪ್ರತಿಮೆ ಸ್ಥಾಪಿಸಲಾಗುವುದು ಎಂದು ಸಮಾಜ ಕಲ್ಯಾಣ ಸಚಿವೆ ಸುಮಿತ್ರಮ್ಮ ಹೇಳಿದ್ದಾರೆ. ಸಕಲ ಸೇನಾ ಗೌರವಗಳೊಂದಿಗೆ ನಾಳೆ ಹುತಾತ್ಮರ ಅಂತಿಮ ಸಂಸ್ಕಾರ ನಡೆಯಲಿದೆ. (ಏಜೆನ್ಸೀಸ್)