ಮರಾವತಿ(ಆಂಧ್ರ ಪ್ರದೇಶ): ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೀಟು ಹಂಚಿಕೆ ವಿಚಾರದಲ್ಲಿ ಎನ್ಡಿಎ ಮೈತ್ರಿಕೂಟದ ಮಿತ್ರಪಕ್ಷಗಳಾದ ತೆಲುಗು ದೇಶಂ ಪಕ್ಷ(ಟಿಡಿಪಿ) ಮತ್ತು ಜನಸೇನಾ ಪಕ್ಷದ ನಡುವೆ ಮನಸ್ತಾಪ ಮೂಡಿದೆ ಎಂದು ಎರಡು ಪಕ್ಷಗಳ ಕಾರ್ಯಕರ್ತರ ಮಧ್ಯೆ ಮನಸ್ತಾಪ ಮೂಡಿದೆ ವರದಿ ಮಾಡಿವೆ.
ಜನಸೇನಾ ಪಕ್ಷದ ಮುಖ್ಯಸ್ಥ, ಆಂಧ್ರಪ್ರದೇಶ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ರಾಜ್ಯ ಸಚಿವ ಸಂಪುಟ ಸಭೆಗಳಿಗೆ ಪದೇ ಪದೇ ಗೈರಾಗುತ್ತಿರುವುದೂ ಮತ್ತು ಟಿಡಿಪಿ ಅಧ್ಯಕ್ಷ, ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರೊಂದಿಗೆ ವೇದಿಕೆ ಹಂಚಿಕೊಳ್ಳದಿರುವುದು ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಿದೆ.
ಆಂಧ್ರಪ್ರದೇಶದಲ್ಲಿ ಎನ್ಡಿಎ ಅಧಿಕಾರದಲ್ಲಿದ್ದು, ಟಿಡಿಪಿ ಮತ್ತು ಬಿಜೆಪಿ ಜೊತೆಗೆ ಜನಸೇನಾ ಪ್ರಮುಖ ಮೈತ್ರಿಕೂಟದ ಪಾಲುದಾರ ಪಕ್ಷವಾಗಿದೆ.
ರಾಜಧಾನಿ ಅಮರಾವತಿಯಲ್ಲಿ ನಡೆದ ಪ್ರಮುಖ ಕಾರ್ಯಕ್ರಮ ಸೇರಿದಂತೆ ಕನಿಷ್ಠ ನಾಲ್ಕು ಸಚಿವ ಸಂಪುಟ ಸಭೆಗಳಿಗೆ ಪವನ್ ಕಲ್ಯಾಣ್ ಅವರು ಗೈರಾಗಿದ್ದಾರೆ. ಅಲ್ಲದೇ ಪ್ರಸ್ತುತ ನಡೆಯುತ್ತಿರುವ ವಿಧಾನಸಭೆ ಅಧಿವೇಶನಗಳಲ್ಲಿಯೂ ಅವರು ಭಾಗವಹಿಸುತ್ತಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.
ಆಗಸ್ಟ್ 1ರಂದು ಭೋಗಾಪುರಂ ವಿಮಾನ ನಿಲ್ದಾಣದ ಉದ್ಘಾಟನಾ ಸಮಾರಂಭದಲ್ಲಿ ನಾಯ್ಡು ಮತ್ತು ಪವನ್ ಅವರು ಕೊನೆಯ ಬಾರಿಗೆ ಒಟ್ಟಿಗೆ ವೇದಿಕೆ ಹಂಚಿಕೊಂಡಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಉಪಸ್ಥಿತರಿದ್ದರು.
ಆಗಸ್ಟ್ 13 ರಂದು ಅಮರಾವತಿಯಲ್ಲಿ ನಡೆದ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಚಂದ್ರಬಾಬು ನಾಯ್ಡು ಅವರು ಭಾಗವಹಿಸಿದ್ದು, ಪವನ್ ಅವರು ಗೈರಾಗಿದ್ದರು. ಆದರೆ ಅದೇ ದಿನ ವಿಶಾಖಪಟ್ಟಣದಲ್ಲಿ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವ ಭೂಪೇಂದರ್ ಯಾದವ್ ಅವರೊಂದಿಗೆ ರಾಷ್ಟ್ರೀಯ ಆನೆ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗುರುವಾರ(ಆ.20) ವಿಧಾನಸಭೆ ಆವರಣದಲ್ಲಿ ನಡೆದ ಜನಸೇನಾ ಶಾಸಕಾಂಗ ಪಕ್ಷದ ಸಭೆಗೆ ಪವನ್ ಅವರು ಹಾಜರಾಗಿದ್ದರಾದರೂ, ವಿಧಾನಸಭೆ ಅಧಿವೇಶನಕ್ಕೆ ಗೈರಾಗಿದ್ದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸೀಟು ಹಂಚಿಕೆ ವಿಚಾರವಾಗಿ ತಮಗೆ ಅಸಮಾಧಾನವಿರುವುದನ್ನು ಪವನ್ ಅವರು ಈ ರೀತಿಯಲ್ಲಿ ತೋರಿಸುತ್ತಿದ್ದಾರೆ ಎಂದು ಆಂಧ್ರಪ್ರದೇಶದ ರಾಜಕೀಯ ವಿಶ್ಲೇಷಕರು ಹೇಳಿದ್ದಾರೆ. ಆ ಮೂಲಕ ತಮ್ಮ ಬೇಡಿಕೆಯನ್ನು ಈಡೇರಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದಿದ್ದಾರೆ.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿಕೂಟದ ಭಾಗವಾಗಿ ಸ್ಪರ್ಧಿಸಬೇಕಾದರೆ ತಮ್ಮ ಪಕ್ಷಕ್ಕೆ ಹಚ್ಚಿನ ಸ್ಥಾನವನ್ನು ಬಿಟ್ಟುಕೊಡಬೇಕು ಎಂದು ಪವನ್ ಕೇಳಿದ್ದರು. ಅಲ್ಲದೇ ಕೆಲ ಮಹಾನಗರ ಪಾಲಿಕೆಗಳನ್ನೂ ಬಿಟ್ಟುಕೊಡುವಂತೆ ಒತ್ತಾಯಿಸಿದ್ದರು. ಆದರೆ, ಈ ಬೇಡಿಕೆಗಳನ್ನು ಟಿಡಿಪಿ ನಿರಾಕರಿಸಿದೆ ಎಂದು ಜನಸೇನಾದ ಉನ್ನತ ಮೂಲಗಳು ಡೆಕ್ಕನ್ ಹೆರಾಲ್ಡ್ಗೆ ತಿಳಿಸಿವೆ.
ಜನಸೇನಾ ಪಕ್ಷಕ್ಕೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಟ್ಟರೆ ಅದು ತಮ್ಮ ತಳಮಟ್ಟದ ಕಾರ್ಯಕರ್ತರು ಮತ್ತು ಸ್ಥಳೀಯ ನಾಯಕರನ್ನು ಅಸಮಾಧಾನಗೊಳಿಸಬಹುದು. ಇದು 2029 ರ ಚುನಾವಣೆಯಲ್ಲಿ ಪಕ್ಷದ ಭವಿಷ್ಯಕ್ಕೆ ಧಕ್ಕೆ ತರಬಹುದು ಎಂಬ ಆತಂಕ ಟಿಡಿಪಿಯದ್ದು.
ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತೆ, ಕಳೆದ ತಿಂಗಳು ಸುದ್ದಿಗಾರರೊಂದಿಗೆ ಮಾತನಾಡಿದ್ದ ಜನಸೇನಾ ರಾಜಕೀಯ ವ್ಯವಹಾರಗಳ ಸಮಿತಿ (ಪಿಎಸಿ) ಅಧ್ಯಕ್ಷ ಮತ್ತು ಕಲ್ಯಾಣ್ ಅವರ ಆಪ್ತ ಸಹಾಯಕ, ಸಚಿವ ನಾದೆಂಡ್ಲ ಮನೋಹರ್, 2024 ರ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಎನ್ಡಿಎ ಮಿತ್ರಪಕ್ಷಗಳ ನಡುವೆ ಏರ್ಪಟ್ಟಿದ್ದ ಚುನಾವಣಾ ತಿಳುವಳಿಕೆಯು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಸ್ವಯಂಚಾಲಿತವಾಗಿ ಅನ್ವಯಿಸುವುದಿಲ್ಲ ಎಂದು ಹೇಳಿದ್ದರು. ಇದು ಪಕ್ಷವು ಹೆಚ್ಚಿನ ಸ್ಥಾನವನ್ನು ಬಯಸುತ್ತಿರುವುದನ್ನು ಸೂಚಿಸುತ್ತದೆ.
ಪವನ್ ಅವರ ಗೈರುಹಾಜರಿಗೆ ಅನಾರೋಗ್ಯ ಮತ್ತು ಇತ್ತೀಚೆಗೆ ನಡೆದ ಹೆಗಲ ಶಸ್ತ್ರಚಿಕಿತ್ಸೆಯೇ ಕಾರಣ ಎಂದು ಜನಸೇನಾ ಹೇಳಿಕೊಂಡಿದ್ದರೂ, ಇತರ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ ಸಚಿವ ಸಂಪುಟ ಸಭೆಗಳು ಮತ್ತು ಅಧಿವೇಶನಗಳಿಂದ ಕಲ್ಯಾಣ್ ದೂರ ಉಳಿದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.





Any questions related to ಪವನ್, ಮಣಿಯದ ನಾಯ್ಡು: ಆಂಧ್ರ ಎನ್ಡಿಎ ಮೈತ್ರಿಕೂಟದಲ್ಲಿ ಮನಸ್ತಾಪ.?