ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ “ಯುವನಿಧಿ” ಯೋಜನೆಯು ನಿರುದ್ಯೋಗಿ ಯುವಕ ಮತ್ತು ಯುವತಿಯರ ಬಾಳಿಗೆ ಬೆಳಕಾಗಿದೆ. ಪದವಿ ಹಾಗೂ ಡಿಪ್ಲೋಮಾ ಮುಗಿಸಿದ ಯುವಕರು ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್ ಪಡೆದುಕೊಳ್ಳಲು, ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು, ಪುಸ್ತಕ ಖರೀದಿಸಲು ಮತ್ತು ತಮ್ಮ ದಿನನಿತ್ಯದ ಖರ್ಚಿಗೆ, ವಿಶೇಷವಾಗಿ ಬಡ ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಈ ಯೋಜನೆಯಿಂದ ಬಹಳ ಉಪಯೋಗವಾಗಿದೆ.
ಪ್ರತಿಯೊಂದಕ್ಕೂ ತಮ್ಮ ತಂದೆ ತಾಯಿಯರ ಮೇಲೆ ಅವಲಂಭಿತರಾಗದೆ ಸ್ವತಂತ್ರರಾಗಿ ತಮ್ಮ ಕಾಲ ಮೇಲೆ ನಿಂತು ಉದ್ಯೋಗ ಪಡೆಯಲು ಈ ಯೋಜನೆಯು ಅವರಿಗೆ ವರದಾನವಾದಂತಾಗಿದೆ. ಪದವಿ ಹಾಗೂ ಡಿಪ್ಲೊಮಾ ಪಾಸಾದ ನಿರುದ್ಯೋಗಿಗಳಿಗೆ ಪ್ರತಿ ತಿಂಗಳು ಪದವಿಧರರಿಗೆ 3000 ಸಾವಿರ ರೂ ಹಾಗೂ ಡಿಪ್ಲೊಮಾ ಪಾಸಾದವರಿಗೆ 1500 ರೂ ನಿರುದ್ಯೋಗ ಭತ್ಯೆಯನ್ನು ಉದ್ಯೋಗ ಸಿಗುವ ತನಕ ಅಥವಾ ಗರಿಷ್ಠ 2 ವರ್ಷಗಳ ಅವಧಿಗೆ ರಾಜ್ಯ ಸರ್ಕಾರದಿಂದ ನಿರುದ್ಯೋಗ ಭತ್ಯೆಯನ್ನು ನೀಡಲಾಗುತ್ತಿದೆ.
ಕರ್ನಾಟಕ ಸರ್ಕಾರ 2023ರ ಡಿಸೆಂಬರ್ 26 ರಂದು “ಯುವನಿಧಿ” ಯೋಜನೆಯ ನೋಂದಣಿಗೆ ಚಾಲನೆ ನೀಡಿದ್ದು, 2024ರ ಜನವರಿ 12 ರಂದು ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಅರ್ಹ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯುವನಿಧಿ ಅರ್ಹ ಅಭ್ಯರ್ಥಿಗಳ ನೋಂದಣೆಗಾಗಿ ಕೊಪ್ಪಳ ಉದ್ಯೋಗ ವಿನಿಮಯ ಕಛೇರಿಯಲ್ಲಿ ವಿಶೇಷ ಹೆಲ್ಫ್ ಡೆಸ್ಕ್ ವ್ಯವಸ್ಥೆ ಮಾಡಲಾಗಿದ್ದು, ಉದ್ಯೋಗ ವಿನಿಮಯ ಅಧಿಕಾರಿಗಳು ಹಾಗೂ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರವು ಯುವನಿಧಿ ಯೋಜನೆ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕಾರ್ಯವನ್ನು ಮಾಡುತ್ತಿದೆ. ಜಿಲ್ಲೆಯ ವಿವಿಧ ಕಾಲೇಜುಗಳಲ್ಲಿ ಯುವನಿಧಿಯ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಪ್ರಸ್ತುತ ವರ್ಷ 2025ರ ಜೂನ್ 30 ರವರೆಗೆ ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 9044 ಫಲಾನುಭವಿಗೆ ಒಟ್ಟು ಮೊತ್ತ ರೂ. 15,17,71,500 ನಿರುದ್ಯೋಗ ಭತ್ಯೆಯನ್ನು ನೀಡಲಾಗಿದೆ.
ಯುವನಿಧಿ ಯೋಜನೆ ಪದವಿ ಹಾಗೂ ಡಿಪ್ಲೊಮಾ ವಿದ್ಯಾಭ್ಯಾಸ ಪೂರ್ಣಗೊಳಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗಿರುವ ಯುವ ಜನರಿಗೆ ಗರಿಷ್ಠ ಎರಡು ವರ್ಷಗಳ ಅವಧಿಗೆ ಈ ಯೋಜನೆ ಅನ್ವಯವಾಗುವುದುದರ ಜೊತೆಗೆ ಇದರಿಂದ ಯುವಕರಲ್ಲಿ ಹೊಸ ಆಶಾಭಾವನೆ ಉಂಟು ಮಾಡಿದೆ. ಅವರು ಧೈರ್ಯವಾಗಿ ಮುನ್ನಡೆಯಲು ತಮ್ಮ ಸ್ವಂತ ಕಾಲಿನ ಮೇಲೆ ಯಾರ ಅವಲಂಬನೆ ಇಲ್ಲದೆ ಜೀವನ ನಡೆಸಲು ಈ ಯೋಜನೆ ತುಂಭಾ ಅನುಕೂಲಕರವಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಪದವಿ ಮುಗಿಸಿದ ನಂತರ ಅವರು ಆರ್ಥಿಕ ಕಾರಣಗಳಿಂದ ಮುಂದಿನ ಕಲಿಕೆಗೆ ಹಿಂದೆಟು ಹಾಕುತ್ತಿದ್ದರು. ಈ ಯೋಜನೆ ಜಾರಿಯಾದಾಗಿನಿಂದ ಅವರಿಗೆ ಮುಂದಿನ ಕಲಿಕೆಗೆ ಪ್ರೋತ್ಸಾಹ ಸಿಕ್ಕಂತಾಗಿದೆ.
ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆಯು ಸೇವಾ ಸಿಂಧು ಪೋರ್ಟಲ್‌ನಲ್ಲಿ ಚಾಲನೆಯಲ್ಲಿದ್ದು, ನಿರುದ್ಯೋಗಿ ಅಭ್ಯರ್ಥಿಗಳು ಸೇವಾ ಸಿಂಧು ಪೋರ್ಟಲ್ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿಯನ್ನು ಸಲ್ಲ http://sevasindhugs.karnataka.gov.in ಿಸಬಹುದಾಗಿದೆ. ಇನ್ನೂ ಅರ್ಜಿ ಸಲ್ಲಿಸದೇ ಇದ್ದವರು ಈ ವೆಬ್‌ಸೈಟ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರಕ್ಕೆ ಭೇಟಿ ನೀಡಿ, ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಗಿದೆ.
ಕೋಟ್:
“ಯುವನಿಧಿ ಯೋಜನೆ ಪದವಿ ಹಾಗೂ ಡಿಪ್ಲೊಮಾ ಮುಗಿಸಿದ ನಿರುದ್ಯೋಗಿ ಯುವಕ ಮತ್ತು ಯುವತಿಯರಿಗೆ ಒಂದು ವರದಾನವಾಗಿದೆ. ನಮ್ಮ ಸರ್ಕಾರದಿಂದ ಈ ಯೋಜನೆಯ ಲಾಭ ಎಲ್ಲಾ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ಸಿಗಬೇಕೆಂಬ ಉದ್ದೇಶದಿಂದ ಶಾಲಾ- ಕಾಲೇಜುಗಳಲ್ಲಿ ಈ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಮಾಡುತ್ತಿದ್ದೆವೆ. ಗ್ರಾಮೀಣ ಭಾಗದ ಯುವಕರಿಗೆ ಇದರಿಂದ ಬಹಳ ಅನುಕೂಲವಾಗಿದೆ. ಕೊಪ್ಪಳ ಜಿಲ್ಲೆಯ ನಿರುದ್ಯೋಗಿ ಯುವಕ ಮತ್ತು ಯುವತಿಯರು ಈ ಯೋಜನೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡಿಕೊಳ್ಳಬೇಕು. ಯಾವುದೇ ಅರ್ಹ ಫಲಾನುಭವಿಗಳು ಹೊರಗುಳಿಯಬಾರದು ಎಂಬ ಉದ್ದೇಶದಿಂದ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ ಹಾಗೂ ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.”
– ರೆಡ್ಡಿ ಶ್ರೀ ನಿವಾಸ ಅಧ್ಯಕ್ಷರು, ಕೊಪ್ಪಳ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ.
“ನಾನು ಬಿ.ಎ ಪದವಿ ಮುಗಿಸಿದ್ದು, ನನಗೆ ಮುಂದೆ ಓದುವುದಕ್ಕೆ ತುಂಬಾ ಆಸಕ್ತಿ ಇದೆ. ನಾನು ಓದಲು ನಗರಕ್ಕೆ ಹೋಗುವ ಅವಶ್ಯಕತೆಯಿದ್ದು ಹಣದ ಅಭಾವವಿತ್ತು. ನಂತರ ನಾನು ಕರ್ನಾಟಕ ಸರ್ಕಾರದ ಗ್ಯಾರಂಟಿ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದೆ. ಈ ಯೋಜನೆಯಿಂದ ಪ್ರತಿ ತಿಂಗಳು ರೂ. 3000/- ನಿರುದ್ಯೋಗಿ ಭತ್ಯೆ ಬರತ್ತಿದ್ದು, ನಗರದಲ್ಲಿ ಉಳಿದುಕೊಳ್ಳಲು ಅವಶ್ಯಕತೆಯಿರುವ ರೂಮ್ ರೆಂಟ್ ಕಟ್ಟಲು ಅನುಕೂಲವಾಗಿದೆ. ನನ್ನ ಮುಂದಿನ ಓದಿಗೆ ಈ ಹಣದಿಂದ ತುಂಬಾ ಅನುಕೂಲವಾಗಿದೆ.”
– ಮಲ್ಲಿಕಾರ್ಜುನ ಜಿ: ಕೊಪ್ಪಳ
“ನಾನು ಬಿ.ಕಾಂ ಪದವಿ ಮುಗಿಸಿದ್ದು, ನನಗೆ ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಯುವನಿಧಿ ಯೋಜನೆಯಿಂದ ಪ್ರತಿ ತಿಂಗಳು ರೂ. 3000 ನಿರುದ್ಯೋಗಿ ಭತ್ಯೆ ಬರುತ್ತಿದ್ದು, ಈ ಭತ್ಯೆಯು ನನ್ನ ಓದಿನ ಖರ್ಚಿಗೆ ಅನುಕೂಲವಾಗಿದೆ. ನಾನು ಕರ್ನಾಟಕ ಸರ್ಕಾರಕ್ಕೆ ಧನ್ಯವಾದಗಳನ್ನು ತಿಳಿಸುತ್ತೆನೆ.”
– ಭಾಗ್ಯಶ್ರೀ, ಕೊಪ್ಪಳ
====================
ಲೇಖನ :- ಡಾ. ಸುರೇಶ ಜಿ.
ಸಹಾಯಕ ನಿರ್ದೇಶಕರು,
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕೊಪ್ಪಳ.