ಬೆಂಗಳೂರು.11.ಆಗಸ್ಟ್.25:- ಇಂದಿನಿಂದಲೇ ಮುಂಗಾರು ಅಧಿವೇಶನ ವಿಧಾನ ಮಂಡಲ ಉಭಯ ಸದನಗಳ ವಿದ್ಯುಕ್ತವಾಗಿ ಆರಂಭವಾಗಲಿದೆ. ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರುಗಳ ನಡುವೆ ವಾಗ್ಯುದ್ಧಕ್ಕೆ ವೇದಿಕೆ ಸಜ್ಜುಗೊಂಡಿದೆ.
ಆಡಳಿತ ವೈಫಲ್ಯಗಳನ್ನು ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷ ಬಿಜೆಪಿ-ಜೆಡಿಎಸ್ ಸನ್ನದ್ಧಗೊಂಡಿದ್ದರೆ, ವಿಪಕ್ಷಗಳಿಗೆ ತಕ್ಕ ಉತ್ತರ ನೀಡಲು ಆಡಳಿತಾರೂಢ ಕಾಂಗ್ರೆಸ್ ಸಕಲ ಸಿದ್ಧತೆ ಮಾಡಿಕೊಂಡಿದೆ.
ಹೀಗಾಗಿ ಸದನ ಕಲಾಪವು ಕಾವೇರುವುದು ನಿಶ್ಚಿತವಾಗಿದೆ.
ಬೆಳಗ್ಗೆ 11ಗಂಟೆಯ ಸುಮಾರಿಗೆ ಕಲಾಪ ಆರಂಭಗೊಳ್ಳಲಿದ್ದು, ನಾಳೆಯಿಂದ ಆ.22ರ ವರೆಗೆ ರಜಾದಿನಗಳನ್ನು ಹೊರತುಪಡಿಸಿದರೆ ಒಟ್ಟು 9 ದಿನಗಳ ಕಾಲ ಅಧಿವೇಶನ ಕಲಾಪ ನಡೆಯಲಿದೆ. ಮೊದಲ ದಿನ ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚನೆ ಮಂಡಿಸಲಾಗುವುದು. ಆ ಬಳಿಕ ಪ್ರಶ್ನೋತ್ತರ, ಗಮನ ಸೆಳೆಯುವ ಸೂಚನೆ ಸೇರಿದಂತೆ ಇನ್ನಿತರ ವಿಚಾರಗಳು ಚರ್ಚೆಗೆ ಬರುವ ಸಾಧ್ಯತೆಗಳಿವೆ.
ಬಜೆಟ್ ಅಧಿವೇಶನದ ವೇಳೆ ಬಿಜೆಪಿಯ 18 ಮಂದಿ ಶಾಸಕರನ್ನು 6 ತಿಂಗಳ ಕಾಲ ಸದನಕ್ಕೆ ಬಾರದಂತೆ ತಡೆಹಿಡಿದು ಅಮಾನತು ಮಾಡಲಾಗಿತ್ತು. ಈ ನಿರ್ಣಯವನ್ನು ಮೇ 25ರಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿತ್ತು. ಈ ಕುರಿತ ಸ್ಥಿರೀಕರಣ ಪ್ರಸ್ತಾವ ಮೊದಲ ದಿನ ಮಂಡನೆಯಾಗಲಿದ್ದು, ವಿಧಾನಸಭೆ ಅನುಮೋದನೆ ನೀಡಬೇಕಿದೆ.
ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಕೊರತೆ, ಶಾಸಕರಿಗೆ ಅನುದಾನ ಬಿಡುಗಡೆಯಲ್ಲಿನ ತಾರತಮ್ಯ, ಜಾತಿ ಗಣತಿ ಮರು ಸಮೀಕ್ಷೆ, ಆರ್‍ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತ, ರಸಗೊಬ್ಬರದ ಅಭಾವ, ಪರಿಶಿಷ್ಟರ ಒಳಮೀಸಲಾತಿ ವರದಿ ಸಲ್ಲಿಕೆ ಪರ-ವಿರೋಧ, ಮತಗಳ್ಳತನದ ಆರೋಪವು ಸೇರಿದಂತೆ ಹಲವು ವಿಚಾರಗಳು ಉಭಯ ಸದನಗಳಲ್ಲಿ ಪ್ರತಿಧ್ವನಿಸಲಿವೆ.
ವಿಧೇಯಕಗಳ ಮಂಡನೆ: ಕರ್ನಾಟಕ ನಾಗರಿಕ ಸೇವಾ-2025ನೆ ಸಾಲಿನ (ಸಾಮಾನ್ಯ ನೇಮಕಾತಿ) (ತಿದ್ದುಪಡಿ) ನಿಯಮಗಳು ವಿಧೇಯಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ(ತಿದ್ದುಪಡಿ ವಿಧೇಯಕ), ಕರ್ನಾಟಕ ಅತ್ಯಾವಶ್ಯಕ ಸೇವೆಗಳ ನಿರ್ವಹಣಾ(ತಿದ್ದುಪಡಿ ವಿಧೇಯಕ) ಸಹಿತ 18ಕ್ಕೂ ಹೆಚ್ಚು ವಿಧೇಯಕಗಳು ಮಂಡನೆಯಾಗಲಿವೆ.
ರಾಜ್ಯದಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಾಗಿದ್ದು, ಅತಿವೃಷ್ಟಿಯಾಗಿದೆ. ನದಿಗಳಲ್ಲಿ ಪ್ರವಾಹ ಉಂಟಾಗಿ ಬೆಳೆಹಾನಿಯಾಗಿದ್ದು ರಾಜ್ಯ ಸರಕಾರವು ಈವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ. ಕೆಲವೆಡೆ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದು, ಮುಂಗಾರು ಹಂಗಾಮಿನ ಬಿತ್ತನೆಗೆ ಹಿನ್ನಡೆಯಾಗಿ ಅನಾವೃಷ್ಟಿ ಉಂಟಾಗಿದೆ. ಈ ವಿಚಾರವು ಚರ್ಚೆಗೆ ಬರಲಿದೆ.
‘ಗೃಹಲಕ್ಷ್ಮಿ ಯೋಜನೆ’ ಸೇರಿದಂತೆ ಗ್ಯಾರಂಟಿ ಫಲಾನುಭವಿಗಳಿಗೆ ಸಕಾಲಕ್ಕೆ ಸರಕಾರದಿಂದ ಹಣ ಬಿಡುಗಡೆಯಾಗುತ್ತಿಲ್ಲ ಎಂಬ ಆರೋಪವು ಸದನದಲ್ಲಿ ಪ್ರಸ್ತಾಪವಾಗಲಿದೆ. ಜತೆಗೆ ರಾಜ್ಯದಲ್ಲಿ ಹಾಲು, ಮದ್ಯ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಪ್ರತಿಧ್ವನಿಸಲಿವೆ. ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಬಿಜೆಪಿ-ಜೆಡಿಎಸ್ ಸಜ್ಜಾಗಿವೆ.
ಭಿನ್ನಮತದ ಸವಾಲು: ಅಧಿವೇಶನ ಕಲಾಪದಲ್ಲಿ ಆಡಳಿತ ಪಕ್ಷವನ್ನು ಕಟ್ಟಿಹಾಕಲು ಪ್ರತಿಪಕ್ಷ ಬಿಜೆಪಿಯ ಬಳಿ ಹಲವು ಅಸ್ತ್ರಗಳಿವೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ ಸೇರಿದಂತೆ ಆ ಪಕ್ಷದಲ್ಲಿನ ಆಂತರೀಕ ಭಿನ್ನಮತ ತಲೆನೋವಾಗಿದೆ. ಇದನ್ನು ಬಿಜೆಪಿ ಹೇಗೆ ನಿಭಾಯಿಸಲಿದೆ ಎಂಬುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಈ ಮಧ್ಯೆ ಬಿಜೆಪಿಯಿಂದ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್ ಹಾಗೂ ಶಿವರಾಂ ಹೆಬ್ಬಾರ್ ಉಚ್ಚಾಟನೆಗೊಂಡಿದ್ದಾರೆ. ಆ ಮೂರು ಮಂದಿ ಶಾಸಕರು ಉಚ್ಚಾಟನೆಗೊಂಡ ಬಳಿಕ ಇದೇ ಮೊದಲ ಬಾರಿ ಸದನ ಕಲಾಪಕ್ಕೆ ಆಗಮಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸದನದಲ್ಲಿ ಅವರು ಬಿಜೆಪಿ ನಾಯಕತ್ವಕ್ಕೆ ಹೇಗೆ ತಿರುಗೇಟು ನೀಡಲಿದ್ದಾರೆಂಬುದು ನಿರೀಕ್ಷೆ ಹುಟ್ಟಿಸಿದೆ.
ಮತ್ತೊಂದೆಡೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿಯೂ ‘ಮುಖ್ಯಮಂತ್ರಿ ಹುದ್ದೆ’ ಕುರಿತು ಪರ-ವಿರೋಧ ಹೇಳಿಕೆಗಳು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸಹಿತ ಇನ್ನಿತರ ವಿಚಾರಗಳ ಬಗ್ಗೆಯೂ ಗೊಂದಲಗಳಿವೆ. ಹೀಗಾಗಿ ಮಳೆಗಾಲದ ಅಧಿವೇಶನ ರಾಜ್ಯದ ಗಮನ ಸೆಳೆದಿದೆ. ಗ್ಯಾರಂಟಿಗಳ ಜತೆಗೆ ಅಭಿವೃದ್ದಿ ಕಾರ್ಯಗಳಿಗೆ ಅನುದಾನ ಒದಗಿಸುವ ಸವಾಲನ್ನು ಸಿಎಂ ಸಿದ್ದರಾಮಯ್ಯ ಹೇಗೆ ನಿರ್ವಹಿಸಲಿದ್ದಾರೆ ಎಂಬ ಕುತೂಲಹ ಮೂಡಿಸಿದೆ.
ಕಾಟಾಚಾರಕ್ಕೆ ಅಧಿವೇಶನ: ‘ಬಿಜೆಪಿ-ಜೆಡಿಎಸ್ ಸಮನ್ವಯ ಸಮಿತಿ ಸಭೆ ನಡೆಸಿದ್ದು, ಅಧಿವೇಶನದಲ್ಲಿ ಎರಡೂ ಪಕ್ಷಗಳು ಒಗ್ಗಟ್ಟಿನಿಂದ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಸದನವನ್ನು 8-9 ದಿನಕ್ಕೆ ಸೀಮಿತ ಮಾಡಿದ್ದು, ಸರಕಾರವು ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ರೈತರ ಸಮಸ್ಯೆಗಳನ್ನು ವಿಶೇಷವಾಗಿ ತೆಗೆದುಕೊಳ್ಳುತ್ತೇವೆ. ಸರಕಾರವು ಉತ್ತರ ಕರ್ನಾಟಕಕ್ಕೆ ಯಾವ ರೀತಿ ಅನ್ಯಾಯ ಮಾಡುತ್ತಿದೆ. ಜನವಿರೋಧಿ, ರೈತ ವಿರೋಧಿ, ಭ್ರಷ್ಟಾಚಾರಿ ಸರಕಾರ ವಿರುದ್ಧ ಚಾಟಿ ಬೀಸುವ ಕೆಲಸ ಮಾಡಲಿದ್ದೇವೆ’
-ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷ