ತುಮಕೂರು.17.ಜುಲೈ.25: ಇಂದು ದಲಿತ ಸಂಘರ್ಷ ಸಮಿತಿ (ಪರಿವರ್ತನ ವಾದ) ಧರ್ಮಸ್ಥಳದಲ್ಲಿ ನಡೆದಿರುವ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ತಿಪ್ಪೇಸ್ವಾಮಿ ಅವರಿಗೆ ಸಮಿತಿ ಪದಾಧಿಕಾರಿಗಳು ಮನವಿ ಪತ್ರ ಸಲ್ಲಿಸಿದರು.
ಧರ್ಮಸ್ಥಳ ಭಾಗದಲ್ಲಿ 20 ವರ್ಷಗಳಿಂದ ನೂರಾರು ವಿದ್ಯಾರ್ಥಿನಿಯರು, ಮಹಿಳೆಯರ ಮೇಲೆ ಅತ್ಯಾಚಾರವೆಸಗಿ, ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ಸಮಿತಿಯ ಬೆಂಗಳೂರು ವಿಭಾಗೀಯ ಸಂಚಾಲಕ ಛಲವಾದಿ ಶೇಖರ್, ‘ಧರ್ಮಸ್ಥಳದಲ್ಲಿ ಅನೇಕರು ತಮ್ಮ ಮಕ್ಕಳು ನಾಪತ್ತೆ ಮತ್ತು ಸಾವಿನ ಬಗ್ಗೆ ದೂರು ನೀಡಲು ಹೋದಾಗ ಅಲ್ಲಿನ ಪೊಲೀಸರು ಸರಿಯಾಗಿ ಸ್ಪಂದಿಸಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಅಕ್ರಮವಾಗಿ ಹೂತಿರುವುದಾಗಿ ವ್ಯಕ್ತಿಯೊಬ್ಬರು ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದಾರೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ನಿವೃತ್ತ ನ್ಯಾಯಾಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಮುಖಂಡರಾದ ಗಂಗಣ್ಣ, ಯಲ್ಲಯ್ಯ ಸಿದ್ದಾಪುರ, ಅಂಬಣ್ಣ ಕೂಕನೂರು, ತಿಮ್ಮಯ್ಯ ಹೀರೆಗುಂಡಗಲ್ಲು, ಸಿದ್ದಲಿಂಗಯ್ಯ ಗೌಡಿಹಳ್ಳಿ, ಲವಕುಮಾರ್ ಮೆಳೇಹಳ್ಳಿ ಇತರರು ಹಾಜರಿದ್ದರು.





Any questions related to ಧರ್ಮಸ್ಥಳದಲ್ಲಿ ಕೊಲೆ: ತನಿಖೆಗೆ ಆಗ್ರಹ?