ಕೊಯಮತ್ತೂರಿನ ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭಾವನಂದ ಮೆಟ್ರಿಕ್ಯುಲೇಷನ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರುಂಥತಿಯಾರ್ ಸಮುದಾಯದ (ಪರಿಶಿಷ್ಟ ಜಾತಿಯ) ಬಾಲಕಿಯನ್ನು ಪರೀಕ್ಷೆ ಬರೆಯಲು ಮೆಟ್ಟಿಲುಗಳ ಮೇಲೆ ಕೂರಿಸಲಾಯಿತು ಎಂದು ವರದಿಯಾಗಿದೆ.
ಇಲಾಖಾ ವಿಚಾರಣೆಯ ನಂತರ, ತಮಿಳುನಾಡು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೋಳಿ ಶುಕ್ರವಾರ ಖಾಸಗಿ ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ ಎಂದು ಹೇಳಿದರು.
ಖಾಸಗಿ ಶಾಲೆಯ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಯಿತು. ಶಾಲೆಯ ಪ್ರಾಂಶುಪಾಲರನ್ನು ಅಮಾನತುಗೊಳಿಸಲಾಗಿದೆ. ಯಾವುದೇ ರೂಪದಲ್ಲಿ ಮಕ್ಕಳ ಮೇಲಿನ ದಬ್ಬಾಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಪ್ರಿಯ ವಿದ್ಯಾರ್ಥಿ, ಒಬ್ಬಂಟಿಯಾಗಿ ಕುಳಿತುಕೊಳ್ಳಬೇಡ! ನಾವು ಇಲ್ಲಿದ್ದೇವೆ. ನಾವು ಇಲ್ಲೇ ಇರುತ್ತೇವೆ,” ಎಂದು ಅನ್ಬಿಲ್ ಮಹೇಶ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇಲ್ಲಿನ ಸೆಂಗುಟ್ಟೈಪಾಳ್ಯಂ ಗ್ರಾಮದಲ್ಲಿರುವ ಸ್ವಾಮಿ ಚಿದ್ಭವಂದ ಮೆಟ್ರಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿದ್ಯಾರ್ಥಿನಿ 8ನೇ ತರಗತಿ ಓದುತ್ತಿದ್ದಳು. ಏ.5 ರಂದು ವಿದ್ಯಾರ್ಥಿನಿಗೆ ಪಿರಿಯಡ್ಸ್ ಆಗಿತ್ತು. ಹೀಗಾಗಿ ಪಿರಿಯಡ್ಸ್ ನಂತರ, ಶಾಲಾ ಆಡಳಿತ ಮಂಡಳಿಯು ಏ.7 ರಂದು ವಿಜ್ಞಾನ ಪರೀಕ್ಷೆ ಮತ್ತು ಏ.9 ರಂದು ಬುಧವಾರ ಸಮಾಜ ವಿಜ್ಞಾನ ಪರೀಕ್ಷೆ ಬರೆಯಲು ಅವಕಾಶ ನೀಡಿತ್ತು.
ಏ.7 ರಂದು ವಿಜ್ಞಾನ ಪರೀಕ್ಷೆಯಲ್ಲಿ ತರಗತಿಯ ಹೊರಗೆ ಕೂರಿಸಿರುವುದಾಗಿ ವಿದ್ಯಾರ್ಥಿನಿ ತನ್ನ ತಾಯಿಗೆ ತಿಳಿಸಿದ್ದಳು. ಮುಂದಿನ ಪರೀಕ್ಷೆಗೆ ವಿದ್ಯಾರ್ಥಿನಿಯ ತಾಯಿ ಶಾಲೆಗೆ ತೆರಳಿದ್ದು, ತರಗತಿಯ ಹೊರಗೆ ಕೂರಿಸಿರುವುದನ್ನು ಗಮನಿಸಿದರು. ಬಳಿಕ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ವಿಡಿಯೋ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದು, ಶಾಲಾ ಆಡಳಿತ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.