ಬೀದರ.09.ಆಗಸ್ಟ್.25:- ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ಮಹಾವಿದ್ಯಾಲಯ ಬೀದರ ಹಾಗೂ ತೋಟಗಾರಿಕೆ ಇಲಾಖೆ (ಜಿಲ್ಲಾ ಪಂಚಾಯತ) ಬೀದರ ಇವರುಗಳ ಸಹಯೋಗದೊಂದಿಗೆ ದಿ. ಡಾ. ಎಂ. ಎಚ್. ಮರೀಗೌಡರ 109 ನೇ ಜನ್ಮ ದಿನದ ನಿಮಿತ್ಯ ಶುಕ್ರವಾರದಂದು ತೋಟಗಾರಿಕೆ ಮಹಾವಿದ್ಯಾಲಯ ಬೀದರನಲ್ಲಿ ಹಮ್ಮಿಕೊಂಡಿದ್ದ ತೋಟಗಾರಿಕೆ ದಿನಾಚರಣೆ ಆಚರಿಸಲಾಯಿತು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ ದಿಲೀಪ ಬದೋಲೆ ಅವರು ದಿ. ಡಾ. ಎಂ. ಎಚ್. ಮರೀಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ತೋಟಗಾರಿಕೆ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದಿ. ಡಾ. ಎಂ. ಎಚ್. ಮರೀಗೌಡರ ಸಾಧನೆಗಳ ಕುರಿತು ಮಾತನಾಡುತ್ತಾ, ಅವರು ಕೈಗೊಂಡ ಅಭಿವೃದ್ಧಿ ಕಾರ್ಯಕ್ರಮಗಳಾದ ಲಾಲ್‌ಬಾಗ್ ಸ್ಥಾಪನೆ, ಹಲವು ತೋಟಗಾರಿಕೆ ಕ್ಷೇತ್ರಗಳ, ನರ್ಸರಿಗಳ ಸ್ಥಾಪನೆ ಹಾಪಕಾಮ್ಸ್ ಅಭಿವೃದ್ಧಿಗಳ ಮೂಲಕ ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೇತ್ರವು ವಿಜೃಂಭಿಸುವಲ್ಲಿ ಕಾರಣಿಭೂತರೆಂದು ನೆನೆದರು.
ರಾಯಚೂರ ಕೃಷಿ ವಿಶ್ವವಿದ್ಯಾಲಯದ ನಿವೃತ ಶಿಕ್ಷಣ ನಿರ್ದೇಶಕ ಡಾ. ಎಂ. ಜಿ. ಪಾಟೀಲ ಮಾತನಾಡಿ, ಕರ್ನಾಟಕದಲ್ಲಿ ತೋಟಗಾರಿಕೆ ಕ್ಷೇತ್ರ ಮುಂಚೂಣಿಗೆ ಬರಲು ದಿ. ಡಾ. ಎಂ. ಎಚ್. ಮರೀಗೌಡರ ದೂರ ದೃಷ್ಟಿ ವ್ಯಕ್ತಿತ್ವವೆ ಮುಖ್ಯ ಕಾರಣವೆಂದು ಹೇಳುತ್ತಾ ವಿದ್ಯಾರ್ಥಿಗಳು ಕೇವಲ ಸರ್ಕಾರಿ ಕೆಲಸಕ್ಕೋಸ್ಕರ ಪದವಿ ಪಡೆಯದೇ ಸ್ವಯಂ ಉದ್ಯಮಿಗಳಾಗಲು ಪದವಿ ಪಡೆಯಿರಿ ಎಂದು ಕರೆ ನೀಡಿದರು.
ಬೀದರ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಎಸ್.ವಿ. ಪಾಟೀಲ ಮಾತನಾಡಿ, ಕೃಷಿ ಆಹಾರ ಭದ್ರತೆಗಾಗಿದ್ದರೆ ತೋಟಗಾರಿಕೆ ಪೌಷ್ಟಿಕಾಂಶ ಹಾಗೂ ಆರ್ಥಿಕ ಭದ್ರತೆಗಾಗಿದೆ. ತೋಟಗಾರಿಕೆ ಮಹಾವಿದ್ಯಾಲ ಬೀದರ ಪ್ರತಿ ವರ್ಷ ಸುಮಾರು 15 ಲಕ್ಷ ಮೌಲ್ಯದ ತೋಟಗಾರಿಕೆ ಸಸಿಗಳನ್ನು ರೈತರಿಗೆ ತಲುಪಿಸುವ ಮುಖಾಂತರ ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರು.
ಬೀದರ ಜಿಲ್ಲಾ ಪಂಚಾಯತ ತೋಟಗಾರಿಕೆ ಉಪ ನಿರ್ದೇಶಕ ಮಲ್ಲಿಕಾರ್ಜುನ್ ಬಾವುಗೆ ಮಾತನಾಡಿ, ತೋಟಗಾರಿಕೆ ಇಲಾಖೆಯಿಂದ ಲಭ್ಯವಿರುವ ವಿವಿಧ ಯೋಜನೆಗಳನ್ನು ರೈತರು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ರೈತರಿಗೆ ಉಚಿತವಾಗಿ ಪೌಷ್ಟಿಕ ಕೈತೋಟ ಕಿಟ್ ಹಾಗೂ ಸಂಪದ್ಭರಿತ ಎರೆ ಗೊಬ್ಬರ ನೀಡಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಕೃಷಿ ಮಹಾವಿದ್ಯಾಲಯದ ನಿವೃತ್ತ ಡೀನ್ ಡಾ. ಸುರೇಶ ಪಾಟೀಲ, ಬೀದರ ಜಿಲ್ಲೆಯ 40 ಪ್ರಗತಿಪರ ರೈತರುಗಳು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ, ತೋಟಗಾರಿಕೆ ಮಹಾವಿದ್ಯಾಲಯ, ಬೀದರನ ಸಿಬ್ಬಂದಿಗಳು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.