ಡಿ.ಕೆ. ಶಿ. ಸಂಪುಟದ 14 ಸಂಭಾವ್ಯ ಸಚಿವರ ವಿವರ
ಬೆಂಗಳೂರು.01.ಜೂನ್.26: ರಾಜ್ಯ ರಾಜಕೀಯದಲ್ಲಿ ಈಗ ದೊಡ್ಡ ಬದಲಾವಣೆಯ ಗಾಳಿ ಬೀಸುತ್ತಿದೆ. ಕಾಂಗ್ರೆಸ್ ವಲಯದಲ್ಲಿ ದೀರ್ಘಕಾಲದಿಂದ ನಡೆಯುತ್ತಿದ್ದ ನಾಯಕತ್ವ ಬದಲಾವಣೆಯ ಚರ್ಚೆಗಳು ಈಗ ಒಂದು ತಾರ್ಕಿಕ ಅಂತ್ಯಕ್ಕೆ ಬಂದಂತೆ ಕಾಣುತ್ತಿವೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲು ಕ್ಷಣಗಣನೆ ಆರಂಭವಾಗಿದ್ದು, ಜೂನ್ 3 ರಂದು ರಾಜಧಾನಿಯ ಲೋಕಭವನದಲ್ಲಿ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ತಯಾರಿ ನಡೆದಿದೆ.
ಡಿಕೆಶಿ ಸಂಪುಟದಲ್ಲಿ ಚದುರಂಗದಾಟ ಮತ್ತು ಜಾತಿ ಲೆಕ್ಕಾಚಾರ
ಕೇವಲ ಮುಖ್ಯಮಂತ್ರಿ ಬದಲಾವಣೆ ಮಾತ್ರವಲ್ಲದೆ, ಇಡೀ ಸಂಪುಟದ ಸ್ವರೂಪವೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ. ಪಕ್ಷದೊಳಗಿನ ಅಸಮಾಧಾನವನ್ನು ಶಮನಗೊಳಿಸಲು ಮತ್ತು ಮುಂಬರುವ ಚುನಾವಣೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಹೈಕಮಾಂಡ್ ನಾಲ್ಕು ಉಪಮುಖ್ಯಮಂತ್ರಿ (ಡಿಸಿಎಂ) ಹುದ್ದೆಗಳನ್ನು ಸೃಷ್ಟಿಸುವ ಗಂಭೀರ ಚಿಂತನೆಯಲ್ಲಿದೆ. ಆದರೆ ಈ ನಾಲ್ಕು ಸ್ಥಾನಗಳಿಗಾಗಿ ಡಜನ್ಗೂ ಹೆಚ್ಚು ಪ್ರಭಾವಿ ನಾಯಕರು ಪೈಪೋಟಿ ನಡೆಸುತ್ತಿರುವುದು ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ.
ಜಾತಿವಾರು ಲೇಕ್ಕಾಚಾರ ಡಿಸಿಎಂ ರೇಸ್ ನಲ್ಲಿರುವ ಪ್ರಮುಖರು
ಓಬಿಸಿ ಕೋಟಾದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರ ಹೆಸರು ಕೇಳಿಬರುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇದು ಸಿದ್ದರಾಮಯ್ಯ ಬಣವನ್ನು ಸಮಾಧಾನಪಡಿಸುವ ತಂತ್ರ ಎಂದು ವಿಶ್ಲೇಷಿಸಲಾಗುತ್ತಿದೆ. ಲಿಂಗಾಯತ ಸಮುದಾಯದ ಪ್ರಬಲ ನಾಯಕರಾದ ಎಂ.ಬಿ. ಪಾಟೀಲ್ ಮತ್ತು ಈಶ್ವರ್ ಖಂಡ್ರೆ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಖಂಡ್ರೆ ಅವರು ತಮಗೆ ಹೆಚ್ಚಿನ ಜವಾಬ್ದಾರಿ ನೀಡುವಂತೆ ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ.
ಇನ್ನು ಮುಸ್ಲಿಂ ಸಮುದಾಯದಿಂದ ಜಮೀರ್ ಅಹಮದ್ ಖಾನ್ ಮತ್ತು ಯು.ಟಿ. ಖಾದರ್ ನಡುವೆ ಜಿದ್ದಾಜಿದ್ದಿ ನಡೆದಿದೆ. ದಲಿತ ಸಮುದಾಯದ ಕೋಟಾದಡಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಮತ್ತು ಯುವ ನಾಯಕ ಪ್ರಿಯಾಂಕ್ ಖರ್ಗೆ ಅವರ ಹೆಸರುಗಳು ಮುಂಚೂಣಿಯಲ್ಲಿವೆ. ಇದರ ನಡುವೆ ಹಿರಿಯ ನಾಯಕ ಕೆ.ಎಚ್. ಮುನಿಯಪ್ಪ ಅವರಿಗೆ ಡಿಸಿಎಂ ಪಟ್ಟ ನೀಡಬೇಕೆಂದು ಅವರ ಬೆಂಬಲಿಗರು ಹಠ ಹಿಡಿದಿದ್ದಾರೆ.
ಜೂನ್ 3ರಂದು ಪ್ರಮಾಣ ವಚನ ಸ್ವೀಕರಿಸಲಿರುವ 14 ಸಂಭಾವ್ಯ ಸಚಿವರ ಪಟ್ಟಿ
ಮೊದಲ ಹಂತದಲ್ಲಿ ಡಿ.ಕೆ. ಶಿವಕುಮಾರ್ ಅವರೊಂದಿಗೆ 14 ಆಪ್ತ ಹಾಗೂ ಪ್ರಭಾವಿ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಹಿರಿಯರು ಮತ್ತು ಯುವ ನಾಯಕರಿಗೆ ಸಮಾನ ಅವಕಾಶ ನೀಡಲಾಗಿದೆ. ಸಂಭಾವ್ಯ ಸಚಿವರ ಪಟ್ಟಿ ಹೀಗಿದೆ
1 ಡಾ. ಜಿ. ಪರಮೇಶ್ವರ್
2 ಕೆ.ಜೆ. ಜಾರ್ಜ್
3 ಪ್ರಿಯಾಂಕ್ ಖರ್ಗೆ
4 ಎಂ.ಬಿ. ಪಾಟೀಲ್
5 ಸತೀಶ್ ಜಾರಕಿಹೊಳಿ
6 ಡಾ. ಯತೀಂದ್ರ ಸಿದ್ದರಾಮಯ್ಯ
7 ಲಕ್ಷ್ಮಿ ಹೆಬ್ಬಾಳ್ಕರ್
8 ರೂಪಾ ಶಶಿಧರ್
9 ಜಮೀರ್ ಅಹಮದ್ ಖಾನ್
10 ಎನ್. ಚಲುವರಾಯಸ್ವಾಮಿ
11 ಬೈರತಿ ಸುರೇಶ್
12 ಯು.ಟಿ. ಖಾದರ್
13 ಕೃಷ್ಣ ಬೈರೇಗೌಡ
14 ದಿನೇಶ್ ಗುಂಡೂರಾವ್ ಅಥವಾ ಎನ್.ಎ. ಹ್ಯಾರಿಸ್
ಈ ಸಂಪುಟ ರಚನೆಯಲ್ಲಿ ಪ್ರಾದೇಶಿಕ ಸಮತೋಲನ ಮತ್ತು ಮಹಿಳಾ ಪ್ರಾತಿನಿಧ್ಯಕ್ಕೂ ಒತ್ತು ನೀಡಲಾಗಿದೆ. ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ರೂಪಾ ಶಶಿಧರ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಮಹಿಳಾ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗಿದೆ. ಒಟ್ಟಾರೆಯಾಗಿ ಜೂನ್ 3ರ ಈ ಮಹತ್ವದ ಬೆಳವಣಿಗೆ ಕರ್ನಾಟಕದ ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದ್ದು, ಅತೃಪ್ತ ನಾಯಕರನ್ನು ಡಿಕೆಶಿ ಹೇಗೆ ನಿಭಾಯಿಸುತ್ತಾರೆ ಎಂಬುದು ಈಗ ಬಾಕಿ ಉಳಿದಿರುವ ದೊಡ್ಡ ಪ್ರಶ್ನೆ ನಿರ್ಮಾಣವಾಗಿವೆ.

