ಬೀದರ.01.ಜುಲೈ.25:- ಇದ್ದ ಸ್ಥಳದಲ್ಲಿಯೇ ಜನರ ಸಮಸ್ಯೆಗಳನ್ನು ಬಗೆಹರಿಸುವ ಕರ್ನಾಟಕ ಸರ್ಕಾರದ ಜನಪ್ರಿಯ ಕಾರ್ಯಕ್ರಮವೇ ಜನಸ್ಪಂದನ ಕಾರ್ಯಕ್ರಮವಾಗಿದೆ ಎಂದು ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಅವರು ತಿಳಿಸಿದರು.
ಅವರು ಮಂಗಳವಾರ ಜನವಾಡ ನಾಡ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ನಡೆದ ತಾಲೂಕಾ ಮಟ್ಟದ ಜನಸ್ಪಂದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜನವಾಡ ಭಾಗದಲ್ಲಿ ಏನೇ ಸಮಸ್ಯೆಯಾಗಿರಲಿ ಜಿಲ್ಲೆಯ ಎಲ್ಲಾ ಇಲಾಖೆಯ ಅಧಿಕಾರಿಗಳು ಇಲ್ಲೆ ಇದ್ದು ನೇರವಾಗಿ ಭೇಟಿ ಮಾಡಿ ಸಮಸ್ಯೆ ಬಗೆಹರಿಸಲಿದ್ದಾರೆ. ಜನವಾಡದಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆ ನಿರ್ಮಾಣ ಆಗಲಿದೆ ಹಾಗೂ ಈ ವಿಭಾಗದಲ್ಲಿ ಅನೇಕ ರಸ್ತೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿವೆ ಎಂದರು.
ಎ ಮತ್ತು ಬಿ ಖಾತಾಗಳ ಸೇವೆಗಳು ಪಂಚಾಯಿತಿ ಮಟ್ಟದಲ್ಲಿ ಕೂಡ ಶೀಘ್ರದಲ್ಲೇ ಆರಂಭವಾಗಲಿದೆ. ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ಫಲಾನುಭವಿಗಳಿಗೆ ನೇರವಾಗಿ ಸೌಲಭ್ಯ ಒದಗಿಸುವ ಪಂಚ ಗ್ಯಾರಂಟಿಗಳು ಜನರ ಜೀವನ ಮಟ್ಟ ಸುಧಾರಿಸುತ್ತಿವೆ ಎಂದರು.
ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಮಾತನಾಡಿ, ಜನಸ್ಪಂದನ ಕಾರ್ಯಕ್ರಮವು ಜನರಿಗೆ ಅತ್ಯಂತ ಉಪಯುಕ್ತವಾದ ಕಾರ್ಯಕ್ರಮವಾಗಿದೆ ಇದರಿಂದ ಜನರು ನೇರವಾಗಿ ಸ್ಥಳದಲ್ಲಿಯೇ ಪರಿಹಾರ ಪಡೆದುಕೊಳ್ಳಬಹುದು ಎಂದರು.
ಈ ಜನಸ್ಪಂದನ ಕಾರ್ಯಕ್ರಮದಲ್ಲಿ ಒಟ್ಟು 253 ಅರ್ಜಿಗಳು ಪಡೆದುಕೊಂಡಿದ್ದು ಇದರಲ್ಲಿ ರಸ್ತೆ, ಮನೆ, ನೀರು, ಸಾರಿಗೆ, ವಿದ್ಯುತ್, ಜಮೀನು, ಒಳಚರಂಡಿ-ಸ್ವಚ್ಛತೆ, ಪಿಂಚಣಿ, ರೇಷನ್ ಕಾರ್ಡ್, ಗಂಗಾ ಕಲ್ಯಾಣ ಯೋಜನೆಯಡಿ ಬೋರವೆಲ್, ದೈಹಿಕ ಅಂಗವಿಕಲತೆ ಪ್ರಮಾಣ ಪತ್ರ ಸಮಸ್ಯೆ ಮತ್ತು ಜನವಾಡ ಮುಖ್ಯ ರಸ್ತೆಯಲ್ಲಿರುವ ಮಧ್ಯ ಅಂಗಡಿ ಸ್ಥಳಾಂತರಿಸುವ ಕುರಿತು ಅರ್ಜಿಗಳಿದ್ದು, ಹಲವು ಅರ್ಜಿಗಳನ್ನು ಸ್ಥಳದಲ್ಲಿಯೇ ಮತ್ತು ಇನ್ನೂಳಿದ ಅರ್ಜಿಯನ್ನು 7 ದಿನದ ಒಳಗಾಗಿ ಇತ್ಯಾರ್ಥಗೊಳಿಸಲು ಸಂಬoಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗಿರೀಶ್ ಬದೋಲೆ ಮಾತನಾಡಿ, ತಮ್ಮ ವ್ಯಾಪ್ತಿಯಲ್ಲಿ ಬರುವ ಸಮಸ್ಯೆಗಳು ಈಗಾಗಲೇ ಕೆಲವು ಇತ್ಯಾರ್ಥಗೊಳಿಸಲಾಗಿದ್ದು ಇನ್ನೂಳಿದವು ಶೀಘ್ರವಾಗಿ ಪರಿಹರಿಸಿ ಈ ಕಾರ್ಯಕ್ರಮವನ್ನು ಅರ್ಥಪೂರ್ಣವಾಗುವಂತೆ ಮಾಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಧವಾ ಆದೇಶ ಪತ್ರ, ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಮಂಜೂರಾದ ಫಲಾನುಭವಿಗಳಿಗೆ ಮನೆಗಳ ಹಕ್ಕು ಪತ್ರ , ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಜಾಬ್ ಕಾರ್ಡ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅಪರ ಜಿಲ್ಲಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ, ನಗರಸಭೆ ಅಧ್ಯಕ್ಷ ಮಹಮ್ಮದ್ ಗೌಸ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಮೃತರಾವ ಚಿಮಕೋಡೆ, ಬೀದರ ಸಹಾಯಕ ಆಯುಕ್ತ ಮೊಹಮದ್ ಶಕೀಲ್, ಬೀದರ ತಹಸಿಲ್ದಾರ್ ಡಿ. ಮೆಹತ್, ತಾಲೂಕಾ ಪಂಚಾಯತ್ ನಿರ್ವಹಣಾಧಿಕಾರಿ ಮಾಣಿಕರಾವ ಪಾಟೀಲ , ನಾಡ ತಹಸಿಲ್ದಾರ್ ಅಶೋಕ್ ರಾಜಗಿರಾ, ಜಿಲ್ಲಾಧಿಕಾರಿ ಕಚೇರಿ ಶಿರಸ್ತೇದಾರ್ ಕಿರಣ್ ಕುಮಾರ್, ಜನವಾಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೈಜಯಂತಿಬಾಯಿ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಜನವಾಡ ಹೊಬಳಿಯ ವಿವಿಧ ಗ್ರಾಮಸ್ಥರು ಉಪಸ್ಥಿತರಿದ್ದರು.