05/08/2025 5:15 AM

Translate Language

Home » ಲೈವ್ ನ್ಯೂಸ್ » ಜನನ ಮರಣ ಮಾಹಿತಿ ನಿಖರವಾಗಿರಲಿ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ಜನನ ಮರಣ ಮಾಹಿತಿ ನಿಖರವಾಗಿರಲಿ – ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

Facebook
X
WhatsApp
Telegram

ಕೊಪ್ಪಳ.09.ಜುಲೈ.25: ಜನನ ಮರಣ ಮಾಹಿತಿಯು ನಿಖರವಾಗಿ ಸಂಗ್ರಹಿಸುವುದರ ಜೊತೆಗೆ ಇದನ್ನು ತಂತ್ರಾಶದಲ್ಲಿ ನೋಂದಣಿಯಾಗುವಂತೆ ನೋಡಿಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.


ಅವರು ಬುಧವಾರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಕರೆದ ಜನನ ಮರಣ ನೋಂದಣಿ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.


ನಾಗರಿಕ ನೋಂದಣಿ ಪದ್ಧತಿಯಡಿ ಜನನ ಮರಣ ಹಾಗೂ ನಿರ್ಜೀವ ಜನನಗಳನ್ನು “ಜನನ ಮರಣ ನೋಂದಣಿ ಅಧಿನಿಯಮಗಳು-1969” ಹಾಗೂ “ಕರ್ನಾಟಕ ಜನನ ಮರಣ ನೋಂದಣಿ ನಿಯಮಗಳು 1999” ರನ್ವಯ ಕಡ್ಡಾಯವಾಗಿ ನೋಂದಣಿ ಮಾಡಬೇಕಾಗಿರುತ್ತದೆ. ಜನನ-ಮರಣ ನೋಂದಣಿಯನ್ನು ಅಧಿನಿಯಮ ಮತ್ತು ನಿಯಮಗಳಂತೆ ಅನುಷ್ಠಾನಕ್ಕೆ ಕ್ರಮವಹಿಸುವುದರ ಜೊತೆಗೆ ಶೇ.100 ರಷ್ಟು ಜನನ, ಮರಣ ಮತ್ತು ನಿರ್ಜೀವ ಜನನಗಳ ಘಟನೆಗಳನ್ನು ನೋಂದಾವಣೆ ಆಗಿರುವ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು ಎಂದರು.


ಬದುಕಿರುವ ಪ್ರತಿಯೊಬ್ಬ ವ್ಯಕ್ತಿಗೆ ಜನನ ಪ್ರಮಾಣ ಪತ್ರ ತುಂಬಾ ಅಗತ್ಯವಾದ ದಾಖಲೆಯಾಗಿದೆ ಮತ್ತು ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತವಾದ ದಾಖಲೆಯಾಗಿದ್ದು, ಈ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು.

ಜನನ ಮತ್ತು ಮರಣ ನೋಂದಣಿ ಕಾರ್ಯವನ್ನು ಜಿಲ್ಲೆಯ ಎಲ್ಲ ಗ್ರಾಮ ಲೆಕ್ಕಿಗರು, ವೈದ್ಯಾಧಿಕಾರಿಗಳು ಹಾಗೂ ನಗರಸಭೆ ಪೌರಾಯುಕ್ತರು, ಈ ಕಾರ್ಯವನ್ನು ಸರಿಯಾಗಿ ನಿರ್ವಹಿಸಬೇಕು. ನೋಂದಣಿ ವೇಳೆ ಸೂಕ್ತ ಪರಿಶೀಲನೆ ಕೈಗೊಂಡು ಅದರ ವದಿಯನ್ನು ಸಲ್ಲಿಸಬೇಕು. ವಿಳಂಬ ನೋಂದಣಿ ಘಟನೆಗಳನ್ನು ತಡೆಯಬೇಕು. ಯಾವುದೇ ದಾಖಲಾತಿ ಬಾಕಿ ಉಳಿಯದಂತೆ ಶೇ.100ರಷ್ಟು ನೋಂದಣಿಯಾಗುವಂತೆ ಕ್ರಮವಹಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.


ಜಿಲ್ಲಾ ಸಾಂಖ್ಯಿಕ ಅಧಿಕಾರಿ ಸುಧಾಕರ ಅ. ಮಾನೆ ಅವರು ಮಾತನಾಡಿ, ಜನನ, ಮರಣ ಮತ್ತು ನಿರ್ಜೀವ ಜನನಗಳ ನೋಂದಣಿ ಕಡ್ಡಾಯವಾಗಿರುತ್ತದೆ. 21 ದಿವಸ ಗಳೊಳಗಾಗಿ ಯಾವುದೇ ಶುಲ್ಕವಿಲ್ಲದೆ ಜನನ ಮರಣ ನೋಂದಣಿಯನ್ನು ಮಾಡಲಾಗುವುದು. 2024ರ ತಿದ್ದುಪಡಿ ನಿಯಮದಂತೆ ಜನನ ಮರಣ ಹೆಚ್ಚುವರಿ ಪ್ರಮಾಣ ಪತ್ರಗಳ ಶುಲ್ಕವು ಈಗ ರೂ.50 ಆಗಿರುತ್ತದೆ.

ವಿಳಂಬ (ತಡ) ನೋಂದಣಿಗೆ ಘಟನೆ ಸಂಭವಿಸಿದ 21 ದಿನಗಳಿಂದ 30 ದಿನದವರೆಗೆ ಶುಲ್ಕ 20 ಆಗಿರುತ್ತದೆ. ಘಟನೆ ಸಂಭವಿಸಿದ 30 ದಿನಗಳ ನಂತರ ಒಂದು ವರ್ಷದವರೆಗೆ ಶುಲ್ಕ ರೂ. 50 ಆಗಿರುತ್ತದೆ. ಕೊಪ್ಪಳ ಜಿಲ್ಲೆಯಲ್ಲಿ 731 ನೋಂದಣಿ ಘಟಕಗಳಿವೆ ಎಂದು ಹೇಳಿದರು.


ಜನನ ಮರಣ ಘಟನೆಗಳನ್ನು ಇ-ಜನ್ಮ ತಂತ್ರಾಂಶದ ಮೂಲಕ ನೋಂದಣಿ ಮಾಡುವ ಕಾರ್ಯ 2015 ರಿಂದ ಪ್ರಾರಂಭಿಸಲಾಗಿದೆ. ತದನಂತರ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 2018 ರಿಂದ ಸಂಪೂರ್ಣವಾಗಿ ಇ-ಜನ್ಮ ತಂತ್ರಾಂಶದ ಮೂಲಕ ಜನನ ಮರಣ ಘಟನೆಗಳನ್ನು ನೋಂದಣಿ ಮಾಡುವ ಕಾರ್ಯವನ್ನು ಕೊಪ್ಪಳ ಜಿಲ್ಲೆಯಾದ್ಯಂತ ಕಡ್ಡಾಯಗೊಳಿಸಲಾಗಿದೆ.

ಎಲ್ಲಾ ನೋಂದಣಾಧಿಕಾರಿಗಳು ಅಥವಾ ಉಪನೋಂದಣಾಧಿಕಾರಿಗಳು ಕಡ್ಡಾಯವಾಗಿ ಡಿಜಿಟಲ್ ಸಹಿಯೊಂದಿಗೆ ಪ್ರಮಾಣ ಪತ್ರಗಳ ವಿತರಣೆ ಮಾಡಬೇಕು. ಜನನ ಮರಣ ನೋಂದಣಿ ಘಟಕಗಳ ಪರಿಶೀಲನೆ ಸೆಕ್ಷನ್ 18ರ ಪ್ರಕಾರ ಜಿಲ್ಲೆಯ ಎಲ್ಲಾ ನೋಂದಣಿ ಘಟಕವು ನಿಯಮಾನುಸಾರ ನೋಂದಣಿ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಹಾಗೂ ಶೇಕಡಾ 100ರಷ್ಟು ಘಟನೆಗಳು ದಾಖಲಾತಿಯಾಗಿರುವ ಬಗ್ಗೆ ಪರಿಶೀಲನೆಯನ್ನು ಕಂದಾಯ, ನಗರಾಭಿವೃದ್ಧಿ ಅಥವಾ ಸಾಂಖ್ಯಿಕ ಇಲಾಖೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದರು.


ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆ ಇಇ ಬಸವರಾಜ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪಿ.ವೈ ಶೆಟ್ಟಪ್ಪನವರ್, ಸಹಾಯಕ ಸಾಂಖ್ಯಿಕ ಅಧಿಕಾರಿಗಳಾದ ಕಾಮಾಕ್ಷೀ ಹಾಗೂ ಪ್ರವೀಣ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿಗಳ ಕಛೇರಿಯ ಸಮಾಲೋಚಕ ದತ್ತು ಪ್ರಸಾದ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿ ಉಪಸ್ಥಿತರಿದ್ದರು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD