ರಾಯಚೂರು.18.ಆಗಸ್ಟ್.25: ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಆಗಸ್ಟ್ 17ರಂದು ರಾಯಚೂರು ನಗರದಲ್ಲಿ ಕ್ಷೇತ್ರ ಭೇಟಿ ನಡೆಸಿ ಗಣೇಶೋತ್ಸವದ ಸಿದ್ಧತಾ ಕ್ರಮಗಳನ್ನು ಖುದ್ದು ಪರಿಶೀಲಿಸಿದರು.

ರಾಯಚೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಗಣಪತಿ ಹಬ್ಬದ ಸಿದ್ಧತೆಗಾಗಿ ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಕ್ಷೇತ್ರ ಭೇಟಿ ನಡೆಸಿ ವಿವಿಧ ಭದ್ರತಾ ಕ್ರಮಗಳು ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು.
ಗಣೇಶೋತ್ಸವ ಸಂದರ್ಭದಲ್ಲಿ ವಿಸರ್ಜನಾ ಮಾರ್ಗ, ಅಗತ್ಯವಿರುವ ರಸ್ತೆ ಕಾಮಗಾರಿಗಳು, ವಿದ್ಯುತ್ ತಂತಿಗಳು ಮತ್ತು ರಸ್ತೆ ಬದಿಯ ಅತಿಕ್ರಮಣಗಳ ಬಗ್ಗೆ ಆಯುಕ್ತರು ಪರಿಶೀಲಿಸಿದರು.

ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದ್ದು, ಆಯಾ ಇಲಾಖೆಯ ಅಧಿಕಾರಿಗಳು ಎಲ್ಲಾ ಅಗತ್ಯತೆಗಳನ್ನು ಸಮಯಕ್ಕೆ ಸರಿಯಾಗಿ ಪರಿಹರಿಸಲು ಸೂಚನೆ ನೀಡಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು, ಡಿವೈಎಸ್ಪಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ವಿವಿಧ ಭದ್ರತಾ ಕ್ರಮಗಳು ಮತ್ತು ಸಂಚಾರ ವ್ಯವಸ್ಥೆಯ ಬಗ್ಗೆ ಚರ್ಚಿಸಿದರು. ಇದೆ ವೇಳೆ ಆಯುಕ್ತರು, ಖಾಸ್ಬಾಬಿಗೆ ಭೇಟಿ ನೀಡಿ ಅಲ್ಲಿನ ಕಾಮಗಾರಿಗಳ ಬಗ್ಗೆ ಪರಿಶೀಲಿಸಿದರು.
ದಾರಿಯಲ್ಲಿ ಸಂಚರಿಸುವ ವೇಳೆಯಲ್ಲಿ ರಸ್ತೆಯಲ್ಲಿನ ಗುಂಡಿಗಳನ್ನು ನೋಡಿದ ಆಯುಕ್ತರು, ಈ ಬಗ್ಗೆ ಹಬ್ಬ ಆರಂಭವಾಗುವುದರೊಳಗೆ ಎಲ್ಲ ಕಡೆಗಿನ ರಸ್ತೆ ಗುಂಡಿಗಳನ್ನು ಮುಚ್ಚಲು ಅಗತ್ಯ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಮಾನ್ಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಗಣೇಶ ಪೂಜಾ ಸಮಿತಿಗಳೊಂದಿಗಿನ ಶಾಂತಿಸಭೆಯಲ್ಲಿ ಗಣೇಶ ಮಂಡಳಿಗಳು ನೀಡಿದ ಸಲಹೆಗಳ ಬಗ್ಗೆ ಇದೆ ವೇಳೆ ಅಧಿಕಾರಿಗಳಿಗೆ ಮನವರಿಕೆ ಮಾಡಿದ ಆಯುಕ್ತರು, ಎಲ್ಲ ಕಾರ್ಯಗಳು ಯುದ್ಧೊಪಾದಿಯಲ್ಲಿ ನಡೆಯಬೇಕು ಎಂದು ನಿರ್ದೇಶನ ನೀಡಿದರು.
ಈ ವೇಳೆ ಮಹಾನಗರ ಪಾಲಿಕೆಯ ಉಪ ಆಯುಕ್ತರಾದ ಸಂತೋಷ ರಾಣಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಅರಣ್ಯ ಸಹಾಯಕ ಸಂರಕ್ಷಣಾಧಿಕಾರಿ, ಸಾಮಾಜಿಕ ಅರಣ್ಯ ಉಪ ಸಂರಕ್ಷಣಾಧಿಕಾರಿ, ಪಶ್ಚಿಮ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮತ್ತು ಸಂಚಾರ ಇನ್ಸ್ಪೆಕ್ಟರ್ ಕ್ಷೇತ್ರ ಭೇಟಿಯಲ್ಲಿದ್ದರು.