09/08/2025 3:35 PM

Translate Language

Home » ಲೈವ್ ನ್ಯೂಸ್ » ಕೊಪ್ಪಳ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್: ಬಾಲಕಾರ್ಮಿಕ ದಾಳಿ, ವಿಶೇಷ ತಪಾಸಣೆ

ಕೊಪ್ಪಳ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್: ಬಾಲಕಾರ್ಮಿಕ ದಾಳಿ, ವಿಶೇಷ ತಪಾಸಣೆ

Facebook
X
WhatsApp
Telegram

ಕೊಪ್ಪಳ.09.ಆಗಸ್ಟ್ .25: ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಕೊಪ್ಪಳ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆ ಹಾಗೂ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಲು ನಡೆಸಿದ ಬಾಲಕಾರ್ಮಿಕ ದಾಳಿ ಮತ್ತು ವಿಶೇಷ ತಪಾಸಣೆ ಕಾರ್ಯಾಚರಣೆಯ ನಡೆಸಲಾಯಿತು.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ನವದೆಹಲಿ ಹಾಗೂ ಜಿಲ್ಲಾಧಿಕಾರಿಗಳು ಕೊಪ್ಪಳ ಹಾಗೂ ಕಾರ್ಮಿಕ ಆಯುಕ್ತರ ನಿರ್ದೇಶನದಂತೆ “ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ” ಅಂಗವಾಗಿ  “PAN-INDIA Rescue & Rehabilitation Campaign 3.0 by NCPCR  ರಕ್ಷಣಾ ಅಭಿಯಾನ ಕಾರ್ಯಾಚರಣೆ ಆಯೋಜಿಸಲು ಸೂಚಿಸಿದ್ದರು.

ಅದರಂತೆ ಬುಧವಾರ ಕೊಪ್ಪಳ ಜಿಲ್ಲೆಯಲ್ಲಿ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲಾ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ಬಾಲಕಾರ್ಮಿಕ ಪುನರ್ವಸತಿ ಸಮಿತಿ ಸಭೆ ಹಾಗೂ ತಾಲೂಕು ಮಟ್ಟದ ಟಾಸ್ಕ್ ಫೋರ್ಸ್ ಸಮಿತಿ ಸಭೆಯನ್ನು ಆಯೋಜಿಸಲಾಯಿತು.

ತಹಶೀಲ್ದಾರರು ಬಾಲಕಾರ್ಮಿಕ ರಕ್ಷಣೆ ಹಾಗೂ ಪುನರ್ವಸತಿ ಕುರಿತು ಮಾಹಿತಿ ನೀಡಿ, ಸಭೆಯಲ್ಲಿ ಹಾಜರಿದ್ದ ಎಲ್ಲಾ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಕಾರ್ಯವ್ಯಾಪ್ತಿಯಲ್ಲಿ ಕಂಡು ಬಂದ ಬಾಲಕಾರ್ಮಿಕ, ಕಿಶೋರ ಕಾರ್ಮಿಕ ಮಕ್ಕಳನ್ನು ಪತ್ತೆ ಹಚ್ಚಿ ಕೆಲಸದಿಂದ ಬಿಡುಗಡೆಗೊಳಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುವುದರ ಮೂಲಕ ಪುನರ್ವಸತಿಗೊಳಿಸಬೇಕು ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿಗಳು ಸಭೆಯಲ್ಲಿ ನೀಡಿದ ಮಾಹಿತಿ ಪ್ರಕಾರ ಶಾಲೆಯಿಂದ ಹೊರಗುಳಿದ 33 ಮಕ್ಕಳನ್ನು ಪುನ: ಶಾಲೆಗೆ ದಾಖಲಿಸುವುದ ಮೂಲಕ ಅವರನ್ನು ಪುನರ್ವಸತಿಗೊಳಿಸಬೇಕು ಹಾಗೂ ಎಲ್ಲಾ ಅಧಿಕಾರಿಗಳಿಗೆ ಮಕ್ಕಳ ಮಾಹಿತಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಛೇರಿ ಸಿಬ್ಬಂದಿಗಳಿಗೆ ಒದಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು ಹಾಗೂ ಸಭೆಯಲ್ಲಿ ಹಾಜರಾಗದೇ ಇರುವ ಅಧಿಕಾರಿಗಳಿಗೆ ನೋಟಿಸ್ ನೀಡಲು ಸೂಚಿಸಿದರು.

ಸಭೆಯಲ್ಲಿ ಹಾಜರಿದ್ದ ಅಧಿಕಾರಿಗಳ ಎರಡು ತಂಡಗಳನ್ನು ರಚಿಸಿ ಬಾಲ ಮತ್ತು ಕಿಶೋರ ಕಾರ್ಮಿಕರನ್ನು ರಕ್ಷಿಸಿ, ಪುನರ್ವಸತಿಗೊಳಿಸಲು ತಪಾಸಣೆ, ಹಠಾತ್ ದಾಳಿಗಳನ್ನು ತಹಶೀಲ್ದಾರರ ನೇತೃತ್ವದಲ್ಲಿ ಕೊಪ್ಪಳ ನಗರದ ವಿವಿಧ ಹೋಟೆಲ್, ಗ್ಯಾರೇಜ್, ಬೇಕರಿ ಅಂಗಡಿ, ಬಟ್ಟೆ ಅಂಗಡಿಗಳಲ್ಲಿ ಕೈಗೊಳ್ಳಲಾಯಿತು.

ಕೊಪ್ಪಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ದುಂಡಪ್ಪ ತುರಾದಿ ಅವರ ನೇತೃತ್ವದಲ್ಲಿ ಗ್ರಾಮೀಣ ಭಾಗದಲ್ಲಿ ತಪಾಸಣೆ ನಡೆಸಲು ಒಂದು ತಂಡ ಮಾಡಿ ತಪಾಸಣೆ ನಡೆಸಲಾಯಿತು. ಈ ತಂಡಗಳಲ್ಲಿ ಕಾರ್ಮಿಕ ನಿರೀಕ್ಷಕಿ ಮಂಜುಳಾ, ಜಿಲ್ಲಾ ಬಾಲಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಬಸವರಾಜ ಹಿರೇಗೌಡ್ರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೋಟಗಾರ, ಕೊಪ್ಪಳ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಂಜುಳಾ ಆರ್., ಕ್ಷೇತ್ರ ಶಿಕ್ಷಣ ಅಧಿಕಾರಿ ಹನುಮಂತಪ್ಪ ಹೆಚ್., ಪಿ.ಎಸ್.ಐ ಈರಪ್ಪ ನಾಯಕ್, ಎ.ಎಸ್.ಐ ದೊಡ್ಡಯ್ಯ ಸಾಲಿಮಠ ಹಾಗೂ ಗ್ರಾಮೀಣ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳು, ಕೃಷಿ ಇಲಾಖೆ ಸಹಾಯಕ ಕೃಷಿ ನಿರ್ದೇಶಕ ಜೀವನಸಾಬ, ಆರೋಗ್ಯ ನಿರೀಕ್ಷಕಿ ರಾಜೇಶ್ವರಿ ಹಾಗೂ ಮುನಿಸ್ವಾಮಿ, ಪ್ರಮೋದ ಆರ್.ಎಸ್.ಗುರಪ್ಪ ಡಿ., ಶರಣಪ್ಪ ಎಸ್. ಮತ್ತು ಮಕ್ಕಳ ಸಹಾಯವಾಣಿ-1098 ಸಿಬ್ಬಂಧಿಗಳು ಸೇರಿದಂತೆ ವಿವಿಧ ಇಲಾಖೆಯ ಸಿಬ್ಬಂದಿಗಳು ಹಾಜರಿದ್ದರು.

ಈ ತಪಾಸಣೆಯಲ್ಲಿ ಕೆ.ಪಿ.ಆರ್ ಅಗ್ರೋ ಕೆಮಿಕಲ್ ಲಿಮಿಟೆಡ್ ಫ್ಯಾಕ್ಟರಿ, ಇಟ್ಟಂಗಿ ಭಟ್ಟಿ, ಕೋಳಿ ಫಾರಂ ಸೆರಿದಂತೆ ವಿವಿಧ ಸಂಸ್ಥೆಗಳಲ್ಲಿ ತಪಾಸಣೆಯನ್ನು ಕೈಗೊಳ್ಳಲಾಯಿತು. ಮತ್ತು ಕೊಪ್ಪಳ ನಗರದಲ್ಲಿ ವಿವಿಧ ವಾಣಿಜ್ಯ ಸಂಸ್ಥೆಗಳು ಗ್ಯಾರೇಜ, ಹೋಟೆಲ್, ಮತ್ತು ಬೇಕರಿಯೆಲ್ಲಿ ತಪಾಸಣೆ ಕೈಗೊಳ್ಳಲಾಗಿ, ಈ ಸಮಯದಲ್ಲಿ ಬೆಂಗಳೂರು ಬೇಕರಿ, ಕೊಪ್ಪಳ ಎಂಬ ಸಂಸ್ಥೆಯಲ್ಲಿ ಇಬ್ಬರು ಮಕ್ಕಳು, ಅಕ್ಬರ್ ಅಟೋ ವರ್ಕ್ಸ್, ಕೊಪ್ಪಳ ಎಂಬ ಸಂಸ್ಥೆಯಲ್ಲಿ ಒಂದು, ಬಸವೇಶ್ವರ ಕಿರಾಣಿ ಸ್ಟೋರ್ ಎಂಬ ಸಂಸ್ಥೆಯಲ್ಲಿ ಒಂದು ಹಾಗೂ ಆಸಿಫ್ ವರ್ಕ್ ಶಾಪ್ ಎಂಬ ಸಂಸ್ಥೆಯಲ್ಲಿ ಒಂದು ಕಿಶೋರ ಕಾರ್ಮಿಕ ಮಕ್ಕಳು ಕೆಲಸ ನಿರ್ವಹಿಸುತ್ತಿರುವುದು ಪತ್ತೆಯಾಗಿದ್ದು, ಈ ಎಲ್ಲಾ ಮಕ್ಕಳನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲಾಯಿತು ಮತ್ತು ಸಂಬಂಧಪಟ್ಟ ಮಾಲೀಕರ ಮೇಲೆ ಕಾನೂನಿನನ್ವಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗುವುದು.

ಇದೇ ಸಂದರ್ಭದಲ್ಲಿ ವಿವಿಧ ಸಂಸ್ಥೆಗಳ ಮಾಲೀಕರಿಗೆ ಕರಪತ್ರಗಳನ್ನು ವಿತರಿಸಿ 18 ವರ್ಷದ ಒಳಗಿನ ಯಾವುದೇ ಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳದಂತೆ ಜಾಗೃತಿ ಮೂಡಿಸಲಾಯಿತು.

Author

Leave a Reply

Your email address will not be published. Required fields are marked *

News Portal Development Companies

ಪ್ರಮುಖ ಸುದ್ದಿ

Stock market

Astrology

error: Content is protected !!

Featuring Advanced Search Functions plugin by YD