ಕೊಪ್ಪಳ.17.ಜುಲೈ.25:- ರಾಜ್ಯದಲ್ಲಿ ನಡೆತಿರುವ ಅಹಿತಕರ ಘಟನೆಗಳು ಅಧಿಕಾರಿಗಳು ಅತ್ಯಾಚಾರಿ ವಿರೋಧ ಕಠಿಣ ಕ್ರಮ ವಹಿಸಬೇಕು ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆಯಲ್ಲಿ ಕೊಪ್ಪಳ ಜಿಲ್ಲೆಯ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದ ತನಕ ನಡೆದ ಪ್ರತಿಭಟನಾ ಮೆರವಣಿಯಲ್ಲಿ ಹೋರಾಟಗಾರರು ಬಾಲಕಿಯನ್ನು ಕಳೆದುಕೊಂಡು ಕುಟುಂಬಕ್ಕೆ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಸಮಸ್ತ ಅಲೆಮಾರಿ ಸಂಘಟನೆಗಳು, ದಲಿತಪರ, ಪ್ರಗತಿಪರ ಮತ್ತು ಶಿಳ್ಳೆಕ್ಯಾತರ ಸಮುದಾಯದ ವತಿಯಿಂದ ಹೋರಾಟ ಜರುಗಿತು.
ಬಾಲಕಿಯ ದಂಪತಿ ಹೊಟ್ಟೆಪಾಡಿಗಾಗಿ ವಲಸೆ ಹೋಗಿದ್ದಾಗ ಈ ಘಟನೆ ನಡೆದಿದೆ. ಬಾಲಕಿ ಅಲೆಮಾರಿ ಸಮುದಾಯಕ್ಕೆ ಸೇರಿದ್ದು ಈ ಘಟನೆಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ವಿಶೇಷ ಪ್ರಕರಣವೆಂದು ಪರಿಗಣಿಸಿ ಬಾಲಕಿ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಿ ನೆರವಾಗಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಅಲ್ಲಮಪ್ರಭು ಬೆಟ್ಟದೂರು, ಕೆ.ಎಂ.ಸೈಯದ್, ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ಕೆ.ಬಿ. ಗೋನಾಳ, ಸಂಜಯದಾಸ್ ಕೌಜಗೇರಿ, ಎಸ್‌ಸಿ ಎಸ್‌ಟಿ ಅಲೆಮಾರಿ ಸಂಘಟನೆಯ ಜಿಲ್ಲಾಧ್ಯಕ್ಷ ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಪರಶುರಾಮ್ ಕೆರೆಹಳ್ಳಿ, ಮಂಜುನಾಥ, ಶರಣಪ್ಪ ಓಜನಹಳ್ಳಿ, ಗೌರಮ್ಮ ಕೂಡ್ಲಿಗಿ, ಹನುಮಕ್ಕ ಎಸ್.ಕೆ., ಸುಬ್ಬಣ್ಣ ಬಳ್ಳಾರಿ, ಅಶೋಕ್ ಕಟಾಗುರ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಹೇಯ ಕೃತ್ಯ ಎಸಗಿದವನ ವಿರುದ್ಧ ಕ್ರಮಕ್ಕೆ ಆಗ್ರಹ ವಿಶೇಷ ಪ್ರಕರಣವೆಂದು ಪರಿಗಣಿಸಲು ಸಂಘಟನೆಗಳ ಒತ್ತಾಯ ವಿವಿಧ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಭಾಗಿ
ಸೂಕ್ತ ಪರಿಹಾರಕ್ಕೆ ಒತ್ತಾಯ
ಅತ್ಯಾಚಾರ ಎಸಗಿದ ದುರುಳನಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಸೂಕ್ತ ಪರಿಹಾರ ಒದಗಿಸಬೇಕು ಎಂದು ತುಂಗಭದ್ರಾ ಮೀನುಗಾರರ ಸಹಕಾರ ಪತ್ತಿನ ಸಂಘ ನಿಯಮಿತದ ಸದಸ್ಯರು ಆಗ್ರಹಿಸಿದ್ದು ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ. ‘ಬಾಲಕಿಯ ಪೋಷಕರಿಗೆ ಒಟ್ಟು ನಾಲ್ಕು ಜನ ಮಕ್ಕಳಿದ್ದು ಮೊದಲ ಮಗ ಸಂಪೂರ್ಣ ಅಂಗವಿಕಲನಾಗಿದ್ದಾನೆ.
ಶಿಕ್ಷಣ ಪಡೆಯಲು ಹಾಸ್ಟೆಲ್ ಸೌಲಭ್ಯ ಸಿಗದ ಕಾರಣಕ್ಕೆ ಮಗಳನ್ನು ಪೋಷಕರು ತಮ್ಮೊಂದಿಗೆ ದುಡಿಯಲು ಕರೆದುಕೊಂಡು ಹೋಗಿದ್ದಾಗ ನೀಚರು ಕೃತ್ಯ ಎಸಗಿದ್ದಾರೆ. ಅವರಿಗೆ ಪರಿಹಾರ ಒದಗಿಸಬೇಕು’ ಎಂದು ಸಂಘ ಆಗ್ರಹಿಸಿದೆ.