ಬೆಂಗಳೂರು.25.ಜುಲೈ.26: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನಕಲಿ ಮತ್ತು ಅಮಾನ್ಯ ಪಿಎಚ್‌ಡಿ (PhD) ಪ್ರಮಾಣಪತ್ರಗಳನ್ನು ಸಲ್ಲಿಸಿ ಅತಿಥಿ ಉಪನ್ಯಾಸಕರಾಗಿ ನೇಮಕಗೊಂಡಿದ್ದ ಬೃಹತ್ ಹಗರಣವನ್ನು ಕಾಲೇಜು ಶಿಕ್ಷಣ ಇಲಾಖೆ ಬಯಲಿಗೆಳೆದಿದೆ. ವಿಶ್ವವಿದ್ಯಾಲಯಗಳ ಪರಿಶೀಲನೆಯಲ್ಲಿ 250 ಅಭ್ಯರ್ಥಿಗಳ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿ ಅಥವಾ ಅಮಾನ್ಯ ಎಂಬುದು ದೃಢಪಟ್ಟ ಹಿನ್ನೆಲೆಯಲ್ಲಿ, ಸರ್ಕಾರ ಅವರ ವಿರುದ್ಧ ಕಠಿಣ ಕ್ರಮಕೆ ಸ್ಥಳಿಯ ಪ್ರಾಂಶುಪಾಲರಿಗೆ ಆದೇಶ ನೀಡಲಾಗಿದೆ.
2025-26ನೇ ಶೈಕ್ಷಣಿಕ ವರ್ಷದ ನೇಮಕಾತಿ ವೇಳೆ ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 10 ಸಾವಿರ ಅತಿಥಿ ಉಪನ್ಯಾಸಕರನ್ನು ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ನೇಮಕ ಮಾಡಲಾಗಿತ್ತು. ನೇಮಕಾತಿಯ ಬಳಿಕ ಸರ್ಕಾರದ ಸೂಚನೆಯಂತೆ ಅಭ್ಯರ್ಥಿಗಳ ಸ್ನಾತಕೋತ್ತರ, NET, K-SET, M.Phil ಹಾಗೂ PhD ಸೇರಿದಂತೆ ಎಲ್ಲ ಶೈಕ್ಷಣಿಕ ದಾಖಲೆಗಳನ್ನು ಪರಿಶೀಲನೆಗಾಗಿ ಸಂಬಂಧಿತ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು.
ಪರಿಶೀಲನೆಯ ವೇಳೆ 250 ಅಭ್ಯರ್ಥಿಗಳು ಸಲ್ಲಿಸಿದ್ದ ಪಿಎಚ್‌ಡಿ ಪ್ರಮಾಣಪತ್ರಗಳು ನಕಲಿ ಅಥವಾ ಮಾನ್ಯತೆ ಇಲ್ಲದವು ಎಂದು ವಿಶ್ವವಿದ್ಯಾಲಯಗಳು ವರದಿ ಸಲ್ಲಿಸಿವೆ. ಈ ವರದಿಯ ಆಧಾರದ ಮೇಲೆ ಸಂಬಂಧಪಟ್ಟ ಎಲ್ಲ ಅತಿಥಿ ಉಪನ್ಯಾಸಕರನ್ನು ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಲಾಗಿದೆ.
ಈ ಹಗರಣದಲ್ಲಿ ಭಾಗಿಯಾಗಿರುವ 250 ಮಂದಿಯ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಿ, ಒಂದು ವಾರದೊಳಗೆ ಪಾಲನಾ ವರದಿ ಸಲ್ಲಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತರು ಎಲ್ಲಾ ಸರ್ಕಾರಿ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಿದ್ದಾರೆ.
ಇದಲ್ಲದೆ, ಈ ಅಭ್ಯರ್ಥಿಗಳನ್ನು 2026-27ನೇ ಶೈಕ್ಷಣಿಕ ವರ್ಷದ ನೇಮಕಾತಿ ಸೇರಿದಂತೆ ಭವಿಷ್ಯದಲ್ಲಿ ನಡೆಯುವ ಯಾವುದೇ ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಕಪ್ಪುಪಟ್ಟಿಗೆ (Blacklist) ಸೇರಿಸಲು ಆದೇಶಿಸಲಾಗಿದೆ.
ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ವಜಾಗೊಂಡ 249 ಅತಿಥಿ ಉಪನ್ಯಾಸಕರ ಪೈಕಿ 148 ಮಂದಿ ಕಲ್ಯಾಣ ಕರ್ನಾಟಕ ಭಾಗದ ಕಾಲೇಜುಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಜಿಲ್ಲಾವಾರು ವಿವರ:
ಕಲಬುರಗಿ – 33
ಯಾದಗಿರಿ – 31
ಬೀದರ್ – 28
ರಾಯಚೂರು – 24
ಕೊಪ್ಪಳ – 13
ವಿಜಯನಗರ – 9
ಬಳ್ಳಾರಿ – 2
ಅದರಲ್ಲೂ ಬೀದರ್ ಜಿಲ್ಲೆಯ ಒಂದೇ ಸರ್ಕಾರಿ ಕಾಲೇಜಿನಲ್ಲಿ 19 ಮಂದಿ ನಕಲಿ ಪಿಎಚ್‌ಡಿ ಪ್ರಮಾಣಪತ್ರಗಳ ಆಧಾರದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದದ್ದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಹಗರಣ ಪತ್ತೆಯಾದದ್ದು ಹೇಗೆ?
ನೇಮಕಾತಿಯ ಬಳಿಕ ನಡೆಯುವ ಕಡ್ಡಾಯ ದಾಖಲೆ ಪರಿಶೀಲನಾ ಪ್ರಕ್ರಿಯೆಯಲ್ಲೇ ಈ ಅಕ್ರಮ ಬೆಳಕಿಗೆ ಬಂದಿದೆ. ಮೊದಲ ಹಂತದಲ್ಲಿ ಕಾಲೇಜು ಮಟ್ಟದಲ್ಲಿ ದಾಖಲೆಗಳನ್ನು ಪರಿಶೀಲಿಸಿ, ನಂತರ ಅವುಗಳನ್ನು ದೃಢೀಕರಣಕ್ಕಾಗಿ ವಿಶ್ವವಿದ್ಯಾಲಯಗಳಿಗೆ ಕಳುಹಿಸಲಾಗಿತ್ತು. ವಿಶ್ವವಿದ್ಯಾಲಯಗಳು ನಕಲಿ ಪ್ರಮಾಣಪತ್ರಗಳನ್ನು ಗುರುತಿಸಿದ ಬಳಿಕ ಇಲಾಖೆಯ ಹಿರಿಯ ಅಧಿಕಾರಿಗಳ ಸಮಿತಿ ಪರಿಶೀಲನೆ ನಡೆಸಿ ವಜಾ ಕ್ರಮಕ್ಕೆ ಆದೇಶ ನೀಡಿದೆ.
ಕೆಲವು ಅಪರೂಪದ ಪ್ರಕರಣಗಳಲ್ಲಿ ಪ್ರಾಂಶುಪಾಲರು ದಾಖಲೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸದ ಹಿನ್ನೆಲೆಯಲ್ಲಿ, ಅಂತಹ ಪ್ರಕರಣಗಳನ್ನು ಮರುಪರಿಶೀಲನೆಗೆ ಒಳಪಡಿಸಲಾಗಿದೆ.
ಈ ಬೆಳವಣಿಗೆ ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಸಂಚಲನಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇಂತಹ ಅಕ್ರಮಗಳ ವಿರುದ್ಧ ಸರ್ಕಾರ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.





Any questions related to ಕರ್ನಾಟಕದಲ್ಲಿ ನಕಲಿ ಪಿಎಚ್‌ಡಿ ಪ್ರಮಾಣಪತ್ರ ಅಂಗಡಿ !?