|

ಕಪ್ಪು ಪಟ್ಟಿ ಧರಿಸಿ ಉಪನ್ಯಾಸಕರ ಪ್ರತಿಭಟನೆ

ಮಂಡ್ಯ.13.ಮಾರ್ಚ್.26: ಮಂಡ್ಯ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಜಿಲ್ಲಾ ಉಪ ನಿರ್ದೇಶಕರ ಕಚೇರಿಗಳ ಮೇಲಿನ ಆಡಳಿತಾತ್ಮಕ ನಿಯಂತ್ರಣ ವಹಿಸಲು ಪ್ರಸ್ತಾಪಿತ ಸರ್ಕಾರದ ಕಡತ ಹಿಂಪಡೆಯಬೇಕು ಎಂದು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರು ನಗರದಲ್ಲಿ ಗುರುವಾರ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ಮಾಡಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾವಣೆಗೊಂಡ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಕಾಲೇಜುಗಳ ಪ್ರಾಂಶುಪಾಲರ ಸಂಘದ ಪದಾಧಿಕಾರಿಗಳು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

‘ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿದ್ದ ಪರೀಕ್ಷಾ ವಿಭಾಗವನ್ನು ಹಿಂದಿನಂತೆ ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶನಾಲಯಕ್ಕೆ ಮರಳಿ ವರ್ಗಾಹಿಸಬೇಕು. ಇಲಾಖೆಯಲ್ಲಿನ ಪ್ರಸ್ತುತ ಇರುವ 320:1 ವಿದ್ಯಾರ್ಥಿ ಉಪನ್ಯಾಸಕರ ಅನುಪಾತವನ್ನು ಎನ್‌ಸಿಇಆರ್‌ಟಿ ಮಾರ್ಗಸೂಚಿಗಳನ್ವಯ ಮರು ನಿಗದಿಪಡಿಸಬೇಕು. ಕಳೆದ ಮೂರು ವರ್ಷಗಳಿಂದ ಪರಿಷ್ಕರಿಸದಿರುವ ದ್ವಿತೀಯ ಪಿಯುಸಿ ಉತ್ತರ ಪತ್ರಿಕೆ ಮೌಲ್ಯಮಾಪನ ಭತ್ಯೆ ಹಾಗೂ ಪರೀಕ್ಷಾ ಸಂಭಾವನೆಯನ್ನು ಪರಿಷ್ಕರಿಸಿ, ಬಾಕಿ ಸಂಭಾವನೆ ಪಾವತಿಸಬೇಕು’ ಎಂದು ಆಗ್ರಹಿಸಿದರು.

‘ಪ್ರಥಮ ಆದ್ಯತೆಯಾಗಿ ಸಂಭಾವನೆಗಳನ್ನು ಖಾಸಗಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರು ಹಾಗೂ ಅತಿಥಿ ಉಪನ್ಯಾಸಕರಿಗೆ ವಿತರಿಸಬೇಕು. ಕಾರ್ಯಭಾರ ಕೊರತೆ ಇರುವ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರನ್ನು ಸೇವೆಯಿಂದ ವಿಮುಕ್ತಿಗೊಳಿಸುವ ಆದೇಶ ಹಿಂಪಡೆಯಬೇಕು. ಅವರಿಗೆ ಸಮೀಪದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಕಾರ್ಯಭಾರ ನೀಡುವ ಕುರಿತು ಸಲ್ಲಿಸಲಾದ ಪ್ರಸ್ತಾವನೆಗೆ ಅನುಮೋದನೆ ನೀಡಬೇಕು’ ಎಂದು ಒತ್ತಾಯಿಸಿದರು.

ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ಹಾಗೂ ಪದೋನ್ನತಿ ಹೊಂದಿದ ಪ್ರಾಂಶುಪಾಲರ ಸ್ಥಳ ನಿಯುಕ್ತಿ ಸಂದರ್ಭದಲ್ಲಿ ಎಲ್ಲಾ ಖಾಲಿ ಹುದ್ದೆಗಳನ್ನು ಯಾವುದೇ ನಿರ್ಬಂಧವಿಲ್ಲದೆ ಆಯ್ಕೆ ಮಾಡಲು ಮುಕ್ತ ಅವಕಾಶ ನೀಡಬೇಕು. ಸರ್ಕಾರ ಬೇಡಿಕೆ ಈಡೇರಿಸದಿದ್ದರೆ 2026 ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-1ರ ಉತ್ತರ ಪತ್ರಿಕೆಗಳ ಮೌಲ್ಯಮಾಪನವನ್ನು ರಾಜ್ಯದ ಎಲ್ಲಾ ಮೌಲ್ಯಮಾಪನ ಕೇಂದ್ರಗಳಲ್ಲಿ ಬಹಿಷ್ಕರಿಸಿ, ಎಲ್ಲರೂ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಂಘದ ಚನ್ನಕೃಷ್ಣಯ್ಯ, ವೆಂಕಟೇಗೌಡ, ಲಕ್ಷ್ಮೀಕಾಂತ್‌, ರಾಮಕೃಷ್ಣೇಗೌಡ, ಹನುಮಂತಪ್ಪ, ಗುರುಲಿಂಗಯ್ಯ, ರವೀಲಾ, ಲತಾ, ಶಿವಲಿಂಗಯ್ಯ, ತಮ್ಮೇಗೌಡ, ಶಿವಲಿಂಗೇಗೌಡ ಭಾಗವಹಿಸಿದ್ದರು.

Similar Posts

Leave a Reply

Your email address will not be published. Required fields are marked *