ಕೊಪ್ಪಳ.13.ಆಗಸ್ಟ್.25: ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾಮಟ್ಟದ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್.ಐ.ವಿ. ಏಡ್ಸ್ ಜಾಗೃತಿ ಅರಿವಿನ ಮಾಸಾಚರಣೆ-2025ರ ಕಾರ್ಯಕ್ರಮವನ್ನು ಮಂಗಳವಾರ ಆಚರಿಸಲಾಯಿತು.
ಕೊಪ್ಪಳ ಜಿಲ್ಲಾ ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಎ.ಶಶಿಧರ ಅವರು ಕಾರ್ಯಕ್ರಮ ಕುರಿತು ಮಾತನಾಡಿ, ಆಗಸ್ಟ್ ರಿಂದ ಸೆಪ್ಟಂಬರ್ ವರೆಗೆ ಜಿಲ್ಲೆಯಲ್ಲಿ ಗ್ರಾಮ ಸಭೆ, ಭಿತ್ತಿ ಚಿತ್ರ ಸ್ಪರ್ಧೆ, ಫ್ಲ್ಯಾಶ್‌ಮಾಬ್, ಬೈಕ್ ರ‍್ಯಾಲಿ, ರಸಪ್ರಶ್ನೆ ಕಾರ್ಯಕ್ರಮ, ಜಾನಪದ ಕಲಾ ತಂಡಗಳಿಂದ ಬೀದಿ ನಾಟಕ, ಆರ್.ಆರ್.ಸಿ ಕಾಲೇಜುಗಳ ಮೂಲಕ ದತ್ತು ಗ್ರಾಮ ಕಾರ್ಯಕ್ರಮಗಳ ಮೂಲಕ ಜಿಲ್ಲೆಯಲ್ಲಿ ಹೆಚ್.ಐ.ವಿ., ಏಡ್ಸ್ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಹೆಚ್.ಐ.ವಿ., ಏಡ್ಸ್ ಹರಡುವಿಕೆ ಚಿಕಿತ್ಸೆ ಮುಂಜಾಗ್ರತೆ ಕುರಿತು ತಿಳಿಸುತ್ತಾ, ಯುವಜನತೆ ಸಾಮಾಜಿಕ ಮಾಧ್ಯಮದ ಪ್ರಭಾವದಿಂದಾಗಿ ದುಶ್ಚಟಗಳಿಗೆ ಬಲಿಯಾಗಬಾರದು ಜಾಗೃತರಾಗಿ ವರ್ತಿಸಬೇಕು ಹಾಗೂ ಒಳ್ಳೆಯ ನಡವಳಿಕೆ ರೂಡಿಸಿಕೊಂಡು ಹೆಚ್.ಐ.ವಿ., ಏಡ್ಸ್ ನಂತಹ ಕಾಯಿಲೆಗಳಿಗೆ ಒಳಗಾಗದೆ ಉತ್ತಮ ಆರೋಗ್ಯ ಕಾಪಾಡಿಕೊಂಡು ದೇಶ ನಿರ್ಮಾಣದ ಮಹತ್ತರ ಪಾತ್ರ ನಿರ್ವಹಿಸಬೇಕು ಎಂದು ಕರೆ ನೀಡಿದರು.
ಕನಕಗಿರಿಯ ಯುವ ಸಬಲೀಕರಣ ಕ್ರೀಡಾ ಇಲಾಖೆಯ ದೈಹಿಕ ಶಿಕ್ಷಕ ಆರ್.ತಿಪ್ಪಣ್ಣ ಅವರು ಮಾತನಾಡಿ, ಜಿಲ್ಲಾಮಟ್ಟದ ಕಾರ್ಯಕ್ರಮವನ್ನು ನಮ್ಮ ಕನಕಗಿರಿಯಲ್ಲಿ ಹಮ್ಮಿಕೊಂಡಿರುವದು ತುಂಬಾ ಸಂತೋಷದ ವಿಷಯ. ಯುವಜನತೆ ದುಶ್ಚಟ, ವಸನಗಳು & ದೃಶ್ಯ ಮಾಧ್ಯಮದ ಪ್ರಭಾವದಿಂದ ಹಾಳಾಗುತ್ತಿದ್ದು, ಈ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಿ, ಅವುಗಳಿಗೆ ಬಲಿಯಾಗದೇ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕನಕಗಿರಿ ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಲಕ್ಷ್ಮಣ ಕಟ್ಟಿಮನಿ ಅವರು ಮಾತನಾಡಿ, ಯುವಕರು ತಮ್ಮನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಯಾವುದೇ ರೀತಿಯ ದುಶ್ಚಟಗಳಿಗೆ ಬಲಿಯಾಗದೆ ಸಮಾಜವನ್ನು ಸಹ ದುಶ್ಷಟಗಳಿಂದ ಕಾಪಾಡುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕನಕಗಿರಿಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅಮರೇಶ್ ದೇವರಾಳ ಅವರು ಮಾತನಾಡಿ, ಯುವಕರು ಜಾಗೃತೆಯಿಂದ ಇರಬೇಕು. ಜೊತೆಗೆ ಉತ್ತಮ ಕೌಶಲ್ಯಗಳನ್ನು ಬೆಳೆಸಿಕೊಂಡು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಳ್ಳುವ ಮೂಲಕ ದೇಶಕ್ಕೆ ಗೌರವ ತರಬೇಕು ಮತ್ತು ಉತ್ತಮ ಸಮಾಜ ನಿರ್ಮಿಸಬೇಕು ಎಂದರು.
ಬಹುಮಾನ ಮತ್ತು ಪ್ರಮಾಣ ಪತ್ರ ವಿತರಣೆ:
ಆ. 11ರಂದು ಕೊಪ್ಪಳದಲ್ಲಿ ನಡೆದ ಜಿಲ್ಲಾಮಟ್ಟದ ಭಿತ್ತಿಚಿತ್ರ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ಅಕ್ಷತಾ ನಾಗದೇವಿ ಎ., ದ್ವಿತೀಯ ಬಹುಮಾನ ಪಡೆದ ಗಂಗಾವತಿಯ ಟಿ.ಎಂ.ಎ.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದ ಅಂಜಲಿ ಹಾಗೂ ತೃತೀಯ ಬಹುಮಾನ ಪಡೆದ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಕಾಲೇಜಿನ ವೈಭವಿ ಅವರಿಗೆ ಕಾರ್ಯಕ್ರಮದಲ್ಲಿ ಬಹುಮಾನ ಮತ್ತು ಪ್ರಮಾಣ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕನಕಗಿರಿ ಪಟ್ಟಣ ಪಂಚಾಯತಿಯ ಅಧ್ಯಕ್ಷರಾದ ಹುಸೇನಬಿ ಚಳ್ಳಮರದ, ಉಪಾಧ್ಯಕ್ಷರಾದ ಕಂಠೀರಂಗ ನಾಯಕ, ತಾಲೂಕು ಪಂಚಾಯಿತಿಯ ಯೋಜನಾಧಿಕಾರಿ ಹುಲಗಪ್ಪ, ಉಪತಹಶಿಲ್ದಾರ ಅನಿತಾ ಇಂಡಿ, ಎನ್.ಎಸ್.ಎಸ್ ಅಧಿಕಾರಿ ಶಿವಪುತ್ರಪ್ಪ ಗಳಪೂಜೆ, ದಂತ ಆರೋಗ್ಯ ಅಧಿಕಾರಿ ಡಾ. ಬಿನಾದೇವಿ, ಜಿಲ್ಲಾ ಮೇಲ್ವಿಚಾರಕ ಮಾಲತೇಶ ಸಜ್ಜನ್, ಸಿಬ್ಬಂದಿಗಳಾದ ರಮೇಶ, ಅಮರೇಶ, ಸಿದ್ದರಾಮಪ್ಪ, ಅಮೀನ್ ಸಾಬ್, ಮೆಹಬೂಬ್, ನಾಗರಾಜ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಉಪನ್ಯಾಸಕ ಹನುಮೇಶ ಲಾಯದುಣಸಿ ಸ್ವಾಗತಿಸಿದರು, ಅಮರೇಶ ಅಂಗಡಿ ಭಿತ್ತಚಿತ್ರ ಬಿಡುಗಡೆ ವಿವರಿಸಿದರು, ಪರ್ವಿನ್ ಬೇಗಮ್ ನಿರೂಪಿಸಿದರು ಹಾಗೂ ಸಿದ್ರಾಮಪ್ಪ ವಂದಿಸಿದರು.