ಲಖನೌ .03. ಡಿಸೆಂಬರ್.25: ಜಾತಿ ವ್ಯವಸ್ಥೆಗೆ ಮಾನ್ಯತೆ ಇಲ್ಲದ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಗಳಿಗೆ ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ರಕ್ಷಣಾ ನಿಬಂಧನೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿರುವ ಪರಿಶಿಷ್ಟ ಜಾತಿಗೆ(ಎಸ್‌ಸಿ) ಸೇರಿದ ಜಿತೇಂದ್ರ ಕುಮಾರ್ ಸಾಹ್ನಿ ಮೇಲೆ ಹಿಂದೂ ದೇವರನ್ನು ಅವಹೇಳನ ಮಾಡಿದ ಕಾರಣ ನೀಡಿ ವಿವಿಧ ವಿಭಾಗಗಳ ಅಡಿಯಲ್ಲಿ ಮೊಕದ್ದಮೆ ಹೂಡಲಾಗಿದೆ.
ಅದನ್ನು ಪ್ರಶ್ನಿಸಿ ಜಿತೇಂದ್ರ ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಪ್ರವೀಣ್ ಕುಮಾರ್ ಗಿರಿ ನೇತೃತ್ವದ ಏಕದಸ್ಯ ಪೀಠ ವಜಾಗೊಳಿಸಿ, ಈ ಮಹತ್ವದ ತೀರ್ಪು ನೀಡಿದೆ.
ತಾನು ಎಸ್‌ಸಿ ಸಮುದಾಯಕ್ಕೆ ಸೇರಿದ್ದು, ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ರಕ್ಷಣೆ ನೀಡುವಂತೆ ಜಿತೇಂದ್ರ ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮನವಿ ಮಾಡಿದ್ದರು.
ಕ್ರಿಶ್ಚಿಯನ್ ಧರ್ಮದಲ್ಲಿ ಜಾತಿ ಆಧಾರಿತ ವ್ಯವಸ್ಥೆ ಇಲ್ಲ. ಆದ್ದರಿಂದ ಪರಿಶಿಷ್ಟ ಜಾತಿಯ ವರ್ಗೀಕರಣದ ಪ್ರಕಾರ ವ್ಯಕ್ತಿಯೊಬ್ಬರು ಆ ಧರ್ಮಕ್ಕೆ ಮತಾಂತರಗೊಂಡ ನಂತರ, ಹಿಂದಿದ್ದ ಜಾತಿ ಪ್ರಮಾಣಪತ್ರ ಮಾನ್ಯವಾಗುವುದಿಲ್ಲ ಎಂದು ನ್ಯಾಯಾಲಯವು ತೀರ್ಪಿನಲ್ಲಿ ವಿವರಿಸಿದೆ.
‘ಜಾತಿ ಆಧಾರಿತ ತಾರತಮ್ಯವನ್ನು ಎದುರಿಸಿದ ಸಮುದಾಯಗಳನ್ನು ರಕ್ಷಿಸುವುದು ಎಸ್‌ಸಿ/ಎಸ್‌ಟಿ(ದೌರ್ಜನ್ಯ ತಡೆ) ಕಾಯ್ದೆ ಉದ್ದೇಶವಾಗಿದೆ. ಹಾಗಾಗಿ ಪರಿಶಿಷ್ಟ ಜಾತಿಗೆ (ಎಸ್‌ಸಿ) ಸೇರಿದ ವ್ಯಕ್ತಿಗಳು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡ ತಕ್ಷಣ ತಮ್ಮ ಎಸ್‌ಸಿ ಸ್ಥಾನಮಾನವನ್ನು ಕಳೆದುಕೊಳ್ಳುತ್ತಾರೆ. ಹಾಗಾಗಿ ಈ ಕಾಯ್ದೆಯಲ್ಲಿನ ರಕ್ಷಣಾತ್ಮಕ ನಿಬಂಧನೆಗಳನ್ನು ವಿಸ್ತರಿಸಲಾಗುವುದಿಲ್ಲ’ ಎಂದು ಪೀಠ ತಿಳಿಸಿದೆ.
ಅರ್ಜಿದಾರರ ಧರ್ಮದ ಕುರಿತು ಮೂರು ತಿಂಗಳೊಳಗೆ ತನಿಖೆ ನಡೆಸಿ. ಒಂದೊಮ್ಮೆ ಧರ್ಮದ ವಿಚಾರವಾಗಿ ನಕಲಿ ದಾಖಲೆ ಸೃಷ್ಟಿಸಿರುವುದು ಸಾಬೀತಾದರೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಈ ಮೂಲಕ ಭವಿಷ್ಯದಲ್ಲಿ ಯಾರೂ ನ್ಯಾಯಾಲಯಕ್ಕೆ ಇಂಥ ಪ್ರಮಾಣಪತ್ರಗಳನ್ನು ಸಲ್ಲಿಸಬಾರದು ಎಂದು ನ್ಯಾಯಾಲಯವು ಇದೇ ವೇಳೆ ಮಹಾರಾಜ್‌ಗಂಜ್‌ನ ಜಿಲ್ಲಾಧಿಕಾರಿಗೆ ನಿರ್ದೇಶಿಸಿತು.
‘ಕಾನೂನು ಅವಕಾಶ ಗಮನಿಸಿ’
ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಇತರೆ ಹಿಂದುಳಿದ ವರ್ಗಗಳಿಗೆ ಕಾನೂನು-ಕಾಯ್ದೆ ಪ್ರಕಾರ ಏನೇನು ಅವಕಾಶಗಳಿವೆ ಎಂಬುದನ್ನು ಗಮನಿಸುವಂತೆ ಕೇಂದ್ರ ಸಂಪುಟ ಕಾರ್ಯದರ್ಶಿ, ಉತ್ತರ ಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನ್ಯಾಯಾಲಯ ನಿರ್ದೇಶನ ನೀಡಿದೆ.
ಇಂತಹ ಸಂವಿಧಾನ ವಿರೋಧಿ ಚಟುವಟಿಕೆಗಳು ಇನ್ನು ಮುಂದೆ ನಡೆಯದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ, ನಾಲ್ಕು ತಿಂಗಳ ಒಳಗಾಗಿ, ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಬೇಕು ಎಂದು ಉತ್ತರ ಪ್ರದೇಶದ ಎಲ್ಲ ಜಿಲ್ಲಾಧಿಕಾರಿಗಳಿಗೆ ಹೈಕೋರ್ಟ್ ಸೂಚನೆ ನೀಡಿದೆ. ಅಲ್ಲದೇ, ಕೈಗೊಂಡ ಕ್ರಮಗಳ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.





Any questions related to ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ರಕ್ಷಣಾ ನಿಬಂಧನೆಗಳನ್ನು ವಿಸ್ತರಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್?