ಈಗ ಮತ್ತೊಮ್ಮೆ ಸಂಪುಟ ಸರ್ಕಸ್ ಶುರು
ಬೆಂಗಳೂರು.19.ಜೂನ್.26:ಮೇಲ್ಮನೆ ಎಲೆಕ್ಷನ್ ನಂತರ: ಎರಡನೇ ಹಂತದ ಸಚಿವ ಸಂಪುಟ ಸರ್ಕಸ್ ಶುರುವಾಗಲಿದ್ದು, ಈ ಸಂಬಂಧದ ಚಟುವಟಿಕೆ ಗರಿಗೆದರುವ ಸಾಧ್ಯತೆ ಇದೆ.
ಹೊಸ ನಾಯಕತ್ವದಲ್ಲಿ ಮೇಲ್ಮನೆ ಚುನಾವಣೆಯಲ್ಲಿನ ಗೆಲುವಿನ ಹುಮ್ಮಸ್ಸಿನೊಂದಿಗೆ ರಾಜ್ಯ ನಾಯಕರು 2ನೇ ಹಂತದ ಸಂಪುಟ ರಚನೆಗೆ ಪ್ರಾರಂಭ.
ಇದಕ್ಕಾಗಿ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಸಮಾರಂಭ ಮುಗಿಯುತ್ತಿದ್ದಂತೆ ಕೈಹಾಕಲಿದ್ದು, ಬಹುತೇಕ ಮಾಸಾಂತ್ಯಕ್ಕೆ ಅಧಿಕೃತ ಪಟ್ಟಿ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಇದುವರೆಗೆ ಚುನಾವಣೆ ಗೆಲ್ಲುವ ಕಡೆಗೆ ಎಲ್ಲರ ಚಿತ್ತ ನೆಟ್ಟಿತ್ತು. ಅದು ಮುಗಿಯುತ್ತಿದ್ದಂತೆ ಜೂ. 21ಕ್ಕೆ ಬಿ.ಕೆ.ಹರಿಪ್ರಸಾದ್ ಅವರ ಪದಗ್ರಹಣ ಸಮಾರಂಭ ನಡೆಯಲಿದೆ. ಇದಾದ ನಂತರ ರಾಜ್ಯ ನಾಯಕರು ದೆಹಲಿ ಕಡೆಗೆ ಮುಖಮಾಡಲಿದ್ದಾರೆ.
ಜತೆಗೆ ಆಕಾಂಕ್ಷಿಗಳೂ ದೌಡಾಯಿಸಲಿದ್ದಾರೆ. ಹಾಗಾಗಿ, ಮತ್ತೊಂದು ಹಂತದ ರಾಜಕೀಯ ಚಟುವಟಿಕೆ ಗರಿಗೆದರಲಿವೆ. ಆದರೆ, ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ವಿದೇಶ ಪ್ರವಾಸ ಕೈಗೊಂಡಿದ್ದು, 1 ವಾರದ ಬಳಿಕ ಹಿಂತಿರುಗಲಿದ್ದಾರೆ. ಆಗ ಸಂಪುಟ ಸರ್ಕಸ್‌ಗೆ ಕೈಹಾಕಲಿದ್ದಾರೆ. ಒಟ್ಟಾರೆ ತಿಂಗಳಾಂತ್ಯಕ್ಕೆ ಈ ನಿಟ್ಟಿನಲ್ಲಿ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

