Home » ಲೈವ್ ನ್ಯೂಸ್ » ಇಂಟರ್ನೆಟ್ ಸಂಪರ್ಕಕ್ಕೆ ಕತ್ತರಿ ಬೀಳುವ ಭೀತಿ; ಭಾರತಕ್ಕೆ ಎದುರಾಗಲಿದೆಯೇ ಸಂಕಷ್ಟ?

ಇಂಟರ್ನೆಟ್ ಸಂಪರ್ಕಕ್ಕೆ ಕತ್ತರಿ ಬೀಳುವ ಭೀತಿ; ಭಾರತಕ್ಕೆ ಎದುರಾಗಲಿದೆಯೇ ಸಂಕಷ್ಟ?

Facebook
X
WhatsApp
Telegram

ಇರಾನ್ ಮತ್ತು ಇಸ್ರೇಲ್ ನಡುವಿನ ಪ್ರಸ್ತುತ ಉದ್ವಿಗ್ನತೆಯಂತಹ ಸಕ್ರಿಯ ಸಂಘರ್ಷವು, ವಿಶೇಷವಾಗಿ ಕೆಂಪು ಸಮುದ್ರ ಮತ್ತು ಹಾರ್ಮುಜ್ ಜಲಸಂಧಿಯಲ್ಲಿನ ಪ್ರಮುಖ ಸಾಗರದೊಳಗಿನ ಕೇಬಲ್‌ಗಳನ್ನು ಅಪಾಯಕ್ಕೆ ಸಿಲುಕಿಸುವ ಮೂಲಕ ಜಾಗತಿಕ ಇಂಟರ್ನೆಟ್ ಸಂಪರ್ಕಕ್ಕೆ ನೇರವಾಗಿ ಬೆದರಿಕೆ ಹಾಕುತ್ತದೆ. ಇಂತಹ ಯುದ್ಧಗಳು ಇಂಟರ್ನೆಟ್ ಸಂಪರ್ಕ ಕಡಿತಗೊಳಿಸುವುದು, ಅಂತರರಾಷ್ಟ್ರೀಯ ಸಂವಹನ ಕಡಿತಗೊಳಿಸುವುದು ಮತ್ತು ಭಾರತದಂತಹ ದೇಶಗಳಿಗೆ ಡೇಟಾ ಪ್ರಸರಣವನ್ನು ನಿಧಾನಗೊಳಿಸುವುದು ಸೇರಿದಂತೆ ಪ್ರಮುಖ ಡಿಜಿಟಲ್ ಅಡಚಣೆಗಳಿಗೆ ಕಾರಣವಾಗುತ್ತವೆ ಅಥವಾ ಬೆದರಿಕೆ ಹಾಕುತ್ತವೆ.ಜಿಗತ್ತಿನ ಕಣ್ಣು ಈಗ ಹಾರ್ಮುಜ್ ಜಲಸಂಧಿಯ (Hormuz Strait) 200 ಅಡಿ ಆಳದ ಸಮುದ್ರದತ್ತ ನೆಟ್ಟಿದೆ. ಇರಾನ್ (Iran) ರೂಪಿಸಿರುವ ಅಪಾಯಕಾರಿ ‘ಮೈನ್ ಗೇಮ್’ (Mine Game) ಕೇವಲ ಯುದ್ಧನೌಕೆಗಳಿಗಷ್ಟೇ ಅಲ್ಲ, ಇಡೀ ವಿಶ್ವದ ಡಿಜಿಟಲ್ ಕ್ರಾಂತಿಗೇ ಕಂಟಕವಾಗುವ ಮುನ್ಸೂಚನೆ ಕಾಣು ಬರುತಿದೆ.

ಸಮುದ್ರದಾಳದಲ್ಲಿ ಇರುವ ಇಂಟರ್ನೆಟ್ ಕೇಬಲ್‌ಗಳ (Internet Cabale) ಮೇಲೆ ಹಾರ್ಮುಜ್ ಬಿಕ್ಕಟ್ಟಿನ ಕರಿನೆರಳು ಬಿದ್ದಿದ್ದು, ಒಂದೇ ಒಂದು ಸ್ಫೋಟ ಇಡೀ ಜಗತ್ತನ್ನೇ ಆಫ್‌ಲೈನ್ (offline) ಮಾಡುವ ತಾಕತ್ತು ಹೊಂದಿದೆ. ಭಾರತದ ಐಟಿ ಹಬ್‌ಗಳಿಂದ ಹಿಡಿದು ಡಿಜಿಟಲ್ ಪಾವತಿಯವರೆಗೆ ಪ್ರತಿಯೊಂದು ವ್ಯವಸ್ಥೆಯೂ ಈ ಕೇಬಲ್‌ಗಳ ಮೇಲೆ ಅವಲಂಬಿತವಾಗಿರುವಾಗ, ಇರಾನ್‌ನ (Iran) ಈ ಸಂಚು ಭಾರತದ ಆರ್ಥಿಕ ಕೋಟೆಗೆ ದೊಡ್ಡ ಹೊಡೆತ ನೀಡಲಿದೆಯೇ ಎಂಬ ಆತಂಕ ಸೃಷ್ಟಿಯಾಗಿದೆ.

ಬೆಳಕಿಗೆ ಬಂದ ಗಂಭೀರ ಅಂಶ!
ಇಸ್ರೇಲ್-ಇರಾನ್ ಸಂಘರ್ಷದ ನಡುವೆ ಜಗತ್ತಿನ ಗಮನ ಹೆಚ್ಚು ಸೆಳೆಯುತ್ತಿರುವ ಸ್ಥಳವೆಂದರೆ ಅದೇ ಹಾರ್ಮುಜ್ ಜಲಮಾರ್ಗ. ಸಾಮಾನ್ಯವಾಗಿ ಈ ಜಲಸಂಧಿಯನ್ನು ತೈಲ ಸಾಗಣೆಯ ಜೀವನಾಡಿಯಾಗಿ ಪರಿಗಣಿಸಲಾಗುತ್ತದೆ. ಆದರೆ, ಇತ್ತೀಚಿನ ಬೆಳವಣಿಗೆಗಳು ಮತ್ತೊಂದು ಗಂಭೀರ ಅಂಶವನ್ನು ಬೆಳಕಿಗೆ ತಂದಿವೆ. ಅದೇ ಜಾಗತಿಕ ಇಂಟರ್ನೆಟ್ ಸಂಪರ್ಕವನ್ನು ಸಾಗಿಸುವ ಸಮುದ್ರದೊಳಗಿನ ಫೈಬರ್-ಆಪ್ಟಿಕ್ ಕೇಬಲ್‌ಗಳು.

ಇವು ಡಿಜಿಟಲ್ ಯುಗದ ನರಜಾಲ!
ಈ ಕೇಬಲ್‌ಗಳು 200 ಅಡಿ ಆಳದ ಸಮುದ್ರದೊಳಗೆ ಇರುವ ಸೂಕ್ಷ್ಮ ಆದರೆ ಅತ್ಯಂತ ಮಹತ್ವದ ಮೂಲಸೌಕರ್ಯ. ವೀಡಿಯೊ ಕರೆಗಳು, ಆನ್‌ಲೈನ್ ಬ್ಯಾಂಕಿಂಗ್, ಕ್ಲೌಡ್ ಸೇವೆಗಳು, ಕೃತಕ ಬುದ್ಧಿಮತ್ತೆ ಆಧಾರಿತ ವ್ಯವಸ್ಥೆ. ಇವೆಲ್ಲವೂ ಈ ಕೇಬಲ್‌ಗಳ ಮೂಲಕ ಹರಿಯುವ ಡೇಟಾ ಮೇಲೆ ಅವಲಂಬಿತವಾಗಿದೆ. ಇವುಗಳನ್ನು “ಡಿಜಿಟಲ್ ಯುಗದ ನರಜಾಲ” ಎಂದು ಕರೆಯಬಹುದು.

ಪ್ರಸ್ತುತ ಸಂಘರ್ಷದ ಹಿನ್ನೆಲೆಯಲ್ಲಿ!
ಇರಾನ್ ಹಾರ್ಮುಜ್ ಜಲಸಂಧಿಯಲ್ಲಿ ನೌಕಾಯಾನವನ್ನು ನಿರ್ಬಂಧಿಸಿರುವುದಾಗಿ ವರದಿಯಾಗಿದೆ. ಸಮುದ್ರ ಆಳದಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂಬ ಆತಂಕವೂ ವ್ಯಕ್ತವಾಗಿದೆ. ಇದರಿಂದ ಕೇವಲ ತೈಲ ಸಾಗಣೆ ಮಾತ್ರವಲ್ಲ, ಈ ಪ್ರದೇಶದ ಮೂಲಕ ಹಾದುಹೋಗುವ ಇಂಟರ್ನೆಟ್ ಕೇಬಲ್‌ಗಳ ಸುರಕ್ಷತೆಯೂ ಪ್ರಶ್ನಾರ್ಥಕವಾಗಿದೆ.

ತಜ್ಞರ ಪ್ರಕಾರ,
ಹಾರ್ಮುಜ್ ಜಲಸಂಧಿ ಮತ್ತು ರೆಡ್ ಸೀ ಜಾಗತಿಕ ಡಿಜಿಟಲ್ ಸಂಪರ್ಕದ ಪ್ರಮುಖ ಗೇಟ್‌ವೇಗಳಾಗಿವೆ. ಯುರೋಪ್, ಏಷ್ಯಾ ಮತ್ತು ಆಫ್ರಿಕಾವನ್ನು ಸಂಪರ್ಕಿಸುವ 20 ಕ್ಕೂ ಹೆಚ್ಚು ಜಲಾಂತರ್ಗಾಮಿ ಕೇಬಲ್‌ಗಳು ಈ ಮಾರ್ಗಗಳಿಂದ ಹಾದುಹೋಗುತ್ತವೆ. ಎಎಇ-ಟ, ಫ್ಯಾಲ್ಕಾನ್, ಗಲ್ಫ್ ಬ್ರಿಡ್ಜ್ ಇಂಟರ್ನ್ಯಾಷನಲ್ ಮತ್ತು ಟಾಟಾ-ಟಿಜಿಎನ್ ಗಲ್ಫ್ ಮುಂತಾದ ಪ್ರಮುಖ ಕೇಬಲ್‌ಗಳು ಭಾರತದ ಅಂತರರಾಷ್ಟ್ರೀಯ ಇಂಟರ್ನೆಟ್ ಸಂಪರ್ಕಕ್ಕೆ ನೇರವಾಗಿ ಬೆಂಬಲ ನೀಡುತ್ತವೆ.

ಸಂಭವಿಸುತ್ತಿವೆ ಹೌತಿ ದಾಳಿಗಳು!
ಯುದ್ಧ ಪರಿಸ್ಥಿತಿ ಈ ಮೂಲಸೌಕರ್ಯವನ್ನು ಅತ್ಯಂತ ದುರ್ಬಲಗೊಳಿಸಿದೆ. ಒಂದು ಕಡೆ ಹಾರ್ಮುಜ್‌ನಲ್ಲಿ ಸೈನಿಕ ಚಟುವಟಿಕೆಗಳು ನಡೆಯುತ್ತಿದ್ದರೆ, ಮತ್ತೊಂದೆಡೆ ಕೆಂಪು ಸಮುದ್ರದಲ್ಲಿ ಹೌತಿ ದಾಳಿಗಳು ಸಂಭವಿಸುತ್ತಿವೆ. ಈ ಕಾರಣದಿಂದ ಹಡಗುಗಳು ಹಾಗೂ ವಿಮಾ ಕಂಪನಿಗಳು ಈ ಮಾರ್ಗಗಳನ್ನು ಬಳಸಲು ಹಿಂಜರಿಯುತ್ತಿವೆ. ಪರಿಣಾಮವಾಗಿ, ಕೇಬಲ್‌ಗಳಿಗೆ ಹಾನಿಯಾದರೆ ಅವುಗಳನ್ನು ತ್ವರಿತವಾಗಿ ದುರಸ್ತಿ ಮಾಡುವುದು ಬಹಳ ಕಷ್ಟಕರವಾಗುತ್ತದೆ.

ಇಂತಹ ಪರಿಸ್ಥಿತಿ ಹೊಸದೇನಲ್ಲ!
2024ರಲ್ಲಿ ಕೆಂಪು ಸಮುದ್ರದಲ್ಲಿ ನಡೆದ ದಾಳಿಯಿಂದ ಹಲವು ಕೇಬಲ್‌ಗಳು ಹಾನಿಗೊಂಡಿದ್ದವು. ಅದರ ಪರಿಣಾಮವಾಗಿ ಏಷ್ಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿ ಇಂಟರ್ನೆಟ್ ವೇಗ ಕುಸಿತ ಕಂಡುಬಂದಿತ್ತು. ದುರಸ್ತಿಗೆ ತಿಂಗಳುಗಳ ಕಾಲ ಬೇಕಾಯಿತು. ಈಗ ಇದೇ ರೀತಿಯ ಪರಿಸ್ಥಿತಿ ಹಾರ್ಮುಜ್ ಜಲಸಂಧಿಯಲ್ಲೂ ಉಂಟಾದರೆ, ಅದು ಜಾಗತಿಕ ಮಟ್ಟದಲ್ಲಿ ಡಿಜಿಟಲ್ ಬಿಕ್ಕಟ್ಟಿಗೆ ಕಾರಣವಾಗಬಹುದು.

ಹೀಗಾದರೆಮುಂದೇನು?
ಇರಾನ್ ಸಂಪೂರ್ಣ ಜಗತ್ತಿನ ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಬಹುದೇ? ತಜ್ಞರ ಉತ್ತರ “ಇಲ್ಲ”. ಆದರೆ, ಈ ಪ್ರದೇಶದ ಕೇಬಲ್‌ಗಳಿಗೆ ಹಾನಿಯಾದರೆ, ಏಷ್ಯಾ-ಯುರೋಪ್-ಆಫ್ರಿಕಾ ನಡುವಿನ ಡೇಟಾ ಸಂಚಾರಕ್ಕೆ ಭಾರೀ ಅಡ್ಡಿ ಉಂಟಾಗಬಹುದು. ಇದರಿಂದ ಇಂಟರ್ನೆಟ್ ನಿಧಾನಗೊಳ್ಳುತ್ತದೆ, ಸೇವೆಗಳು ವ್ಯತ್ಯಯಗೊಳ್ಳುತ್ತವೆ ಮತ್ತು ಜಾಲತಾಣಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ.

ಭಾರತಕ್ಕೂ ಇದರ ಪರಿಣಾಮ ತಪ್ಪುವುದಿಲ್ಲ!
ಭಾರತದ ಅನೇಕ ಅಂತರರಾಷ್ಟ್ರೀಯ ಕೇಬಲ್‌ಗಳು ಪರ್ಷಿಯನ್ ಕೊಲ್ಲಿಯ ಮೂಲಕ ಹಾದುಹೋಗುತ್ತವೆ. ಅವುಗಳಿಗೆ ಹಾನಿಯಾದರೆ, ವೀಡಿಯೊ ಕರೆಗಳು, ಆನ್‌ಲೈನ್ ಬ್ಯಾಂಕಿಂಗ್, ಕ್ಲೌಡ್ ಸೇವೆಗಳು ಮತ್ತು ಐಟಿ ಉದ್ಯಮದ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತದೆ. ವಿಶೇಷವಾಗಿ ಜಾಗತಿಕ ಸಂಪರ್ಕದ ಮೇಲೆ ಅವಲಂಬಿತವಾಗಿರುವ ಭಾರತದ ತಂತ್ರಜ್ಞಾನ ಕ್ಷೇತ್ರಕ್ಕೆ ಇದು ಸವಾಲಾಗಬಹುದು.

ಎದುರಾದ ತೀರಾ ಸಂಕಷ್ಟ!
ಬ್ಯಾಕಪ್ ವ್ಯವಸ್ಥೆಗಳು ಇದ್ದರೂ ಅವು ಸಂಪೂರ್ಣ ಪರಿಹಾರವಲ್ಲ. ಡೇಟಾವನ್ನು ಬೇರೆ ಮಾರ್ಗಗಳಿಗೆ ತಿರುಗಿಸಬಹುದು, ಆದರೆ ಅದು ನಿಧಾನಗೊಳ್ಳುತ್ತದೆ ಮತ್ತು ವೆಚ್ಚ ಹೆಚ್ಚಿಸುತ್ತದೆ. ಹಾರ್ಮುಜ್ ಮತ್ತು ಕೆಂಪು ಸಮುದ್ರ ಎರಡೂ ಮಾರ್ಗಗಳು ಒಂದೇ ಸಮಯದಲ್ಲಿ ವ್ಯತ್ಯಯಗೊಂಡರೆ, ಜಗತ್ತಿನ ಡಿಜಿಟಲ್ ವ್ಯವಸ್ಥೆಗಳು ಭಾರೀ ಒತ್ತಡಕ್ಕೆ ಒಳಗಾಗುತ್ತವೆ.

Author

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Stock market

Astrology