ರಾಯಚೂರು.13.ಆಗಸ್ಟ್.25: ಸಮಾಜದ ಪ್ರತಿಯೊಬ್ಬರು ಮಾದಕ ವಸ್ತುಗಳ ದುಷ್ಪರಿಣಾಮ ಅರಿತು ಮಾದಕ ದ್ರವ್ಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅರೋಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೌಡಯ್ಯ ನಾಯಕ ಅವರು ಹೇಳಿದರು.
ಆಗಸ್ಟ್ 13ರ ಬುಧವಾರ ದಂದು ಜಿಲ್ಲೆಯ ಅರೋಲಿ ಗ್ರಾಮದಲ್ಲಿರುವ ಹುಲಿಗೆಮ್ಮ ಸಂಜೀವಿನಿ ಗ್ರಾಮ ಪಂಚಾಯಿತಿ ಒಕ್ಕೂಟದ ಕಚೇರಿಯಲ್ಲಿ ಜಿಲ್ಲಾ ಪಂಚಾಯತ್ ರಾಯಚೂರು, ತಾಲೂಕು ಪಂಚಾಯಿತಿ ಮಾನವಿ, ಗ್ರಾಮ ಪಂಚಾಯಿತಿ ಅರೋಲಿ, ಸಂಜೀವಿನಿ ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ, ಹುಲಿಗೆಮ್ಮ ದೇವಿ ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಾದಕ ದ್ರವ್ಯ ಮುಕ್ತ ಕರ್ನಾಟಕ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಮಾದಕ ದ್ರವ್ಯ ಬಳಕೆ ಮತ್ತು ವ್ಯಸನದಿಂದ ಉಂಟಾಗುವ ಹಿಂಸೆ, ದೌರ್ಜನ್ಯ ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಸಮಗ್ರ ಜಾಗೃತಿ ಮೂಡಿಸಲಾಗುತ್ತದೆ. ಮಾದಕ ದ್ರವ್ಯ ಬಳಕೆ ಮಾಡುವುದರಿಂದ ಜೀವನ ನಾಶವಾಗುವುದು ಎಂದು ತಿಳಿಸಿದರು.
ಎನ್.ಆರ್.ಎಲ್.ಎಮ್ ವಲಯ ಮೇಲ್ವಿಚಾರಕರಾದ ಶರಣು ಬಸವ ಅವರು ಮಾತನಾಡಿ, ಮಾನವನ ಆರೋಗ್ಯಕ್ಕೆ ಮಾರಕವಾಗಿರುವಂತಹ ಗಾಂಜಾ, ಅಫೀಮ್ ದಂತಹ ಮಾದಕ ದ್ರವ್ಯಗಳಿಂದ ದೂರವಿರಬೇಕು. ತಮ್ಮ ಸುತ್ತಲಿನ ಪರಿಸರದಲ್ಲಿ ಮಾದಕ ದ್ರವ್ಯ ಸೇವಿಸದಂತೆ ಶ್ರಮ ವಹಿಸಬೇಕು. ಅಂದಾಗ ಮಾದಕ ವ್ಯಸನ ಮುಕ್ತವಾದ ಕರ್ನಾಟಕ ನಿರ್ಮಾಣ ಮಾಡಲು ಸಾಧ್ಯವಿದೆ. ಸಮಾಜದ ಪ್ರತಿಯೊಬ್ಬ ಸದಸ್ಯರು ಮಾದಕ ವಸ್ತುಗಳ ಕೆಟ್ಟ ಪರಿಣಾಮ ಹಾಶಗೂ ವ್ಯಸನಕ್ಕೆ ಸಂಬAಧಿಸಿದ ಸಮಸ್ಯೆಗಳು ಮತ್ತು ಋಣಾತ್ಮಕ ಪರಿಣಾಮಗಳನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಜೀವನ ನಡೆಸಬೇಕೆಂದರು.
ಇದೇ ವೇಳೆ ಮಾದಕ ಮುಕ್ತ ಕರ್ನಾಟಕ ನಿರ್ಮಾಣ ಮಾಡಲು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವೀರಾರೆಡ್ಡಿ, ಎನ್.ಆರ್.ಎಲ್.ಎಮ್. ವಲಯ ಮೇಲ್ವಿಚಾರಕರಾದ ಸೂರತ್ ಪ್ರಸಾದ್ ಗಟ್ಟು, ತಾಲೂಕು ಸಂಪನ್ಮೂಲ ವ್ಯಕ್ತಿಗಳಾದ ರುದ್ರಮ್ಮ, ಚನ್ನಬಸ್ಸಮ್ಮ, ಒಕ್ಕೂಟದ ಅಧ್ಯಕ್ಷ ಶಿವಮ್ಮ, ಕಾರ್ಯದರ್ಶಿ ಪಾರ್ವತಿ, ಖಜಾಂಚಿ ಕಲಾವತಿ, ಎಂಬಿಕೆ ಮಹಿಬೂಬಿ, ಎಲ್.ಸಿ.ಆರ್.ಪಿ. ಮಲ್ಲಿಕಾ, ಕೃಷಿ ಸಖಿ ಅಂಬಿಕಾ, ಗ್ರಾಮ ಪಂಚಾಯಿತಿ ಸಿಬ್ಬಂದಿ ಜಗದೀಶ್, ಬಸವರಾಜ, ಅಂಗನವಾಡಿ ಶಿಕ್ಷಕಿ ರೇಣುಕಾ ಮತ್ತು ಸ್ವ ಸಹಾಯ ಗುಂಪಿನ ಮಹಿಳೆಯರು ಹಾಜರಿದ್ದರು.