ಕೊಪ್ಪಳ.07.ಆಗಸ್ಟ್ .25: ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಅಮರೇಶ ಬಡಿಗೇರ ಇತನ ಮೇಲಿನ ಆರೋಪ ಸಾಭಿತಾಗಿದೆ ಎಂದು ಕೊಪ್ಪಳ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ ನ್ಯಾಯಾಲಯದ (ಪೋಕ್ಸೊ) ನ್ಯಾಯಾಧೀಶರು ಅಪರಾಧಿಗೆ ಶಿಕ್ಷೆ ವಿಧಿಸಿರುತ್ತಾರೆ.
ಅಮರೇಶ ಬಡಿಗೇರ ಸಿಂಧನೂರ ತಾಲೂಕಿನ ಕನಿಹಾಳ ಗ್ರಾಮದವನಿದ್ದು ಬಾಧಿತಳು ಕೂಡ ಕನಿಹಾಳ ಗ್ರಾಮದ ತನ್ನ ಅಜ್ಜಿಯ ಮನೆಯಲ್ಲಿದ್ದ. ಪ್ರತಿದಿನ ಬಾಧಿತಳು ಸಿಂಧನೂರಿನ ಕಾಲೇಜಿಗೆ ಹೋಗಿ ಬರುವಾಗ ಆರೋಪಿತನು ದಾರಿಯಲ್ಲಿ ಬಾಧಿತಳಿಗೆ ನೋಡಿ ಸಲುಗೆಯಿಂದ ಮಾತನಾಡಿಸುತ್ತ ಪ್ರೀತಿಸುವುದಾಗಿ ಮತ್ತು ಮದುವೆಯಾಗುವುದಾಗಿ ಹೇಳುತ್ತಿದ್ದು, ಬಾಧಿತಳು ನಿರಾಕರಿಸಿದರೂ ಹಿಂಬಾಲಿಸುತ್ತಿದ್ದ. ದಿನಾಂಕ 03-10-2023 ರಂದು ನಾಳೆ ಬೆಂಗಳೂರಿಗೆ ಹೋಗೊಣ ತೋರಿಸಿಕೊಂಡು ಬರುತ್ತೇನೆ ಎಂದು ಹೇಳಿದಾಗ ವಿಷಯವನ್ನು ನಮ್ಮ ಮಾವನಿಗೆ ತಿಳಿಸುತ್ತೇನೆ ಎಂದು ಹೇಳಿರುತ್ತಾಳೆ. ಆರೋಪಿತನು ನೀನು ಬರದಿದ್ದರೆ ನಾನು ಸತ್ತು ಹೋಗುತ್ತೇನೆ ನನ್ನ ಸಾವಿಗೆ ನೀನೆ ಕಾರಣ ಎಂದು ಹೆದರಿಸಿದ್ದರಿಂದ ಬಾಧಿತಳು ಒಪ್ಪಿಕೊಂಡಿರುತ್ತಾಳೆ.
ದಿ: 04-10-2023 ರಂದು ಬೆಳಿಗ್ಗೆ 10 ಗಂಟೆಗೆ ಆರೋಪಿ ಬಾಧಿತಳನ್ನು ತಾವರಗೇರಾದಿಂದ ಬಲವಂತವಾಗಿ ಅಪಹರಣ ಮಾಡಿಕೊಂಡು ಬೆಂಗಳೂರಿನ ಕೆಂಗೇರಿ ಹತ್ತಿರದ ರಾಮಸಂದ್ರ ಗ್ರಾಮಕ್ಕೆ ಕರೆದುಕೊಂಡು ಹೋಗಿ ಒಂದು ಮನೆ ಬಾಡಿಗೆಗೆ ಪಡೆದುಕೊಂಡು ಬಾಧಿತಳನ್ನು ಆ ಮನೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ರಾತ್ರಿ ಸಮಯದಲ್ಲಿ ಬಾಧಿತಳ ಇಚ್ಚೆಗೆ ವಿರುದ್ಧವಾಗಿ 2 ರಿಂದ 3 ಸಲ ದೈಹಿಕ ಅತ್ಯಾಚಾರ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ತಾವರಗೇರಾ ಪೋಲಿಸ ಠಾಣೆಯ ಪಿ.ಎಸ್.ಐ ಮಲ್ಲಪ್ಪ ಅವರು ದೂರು ಸ್ವೀಕರಿಸಿ ಪ್ರಥಮ ಹಂತದ ತನಿಖೆಯನ್ನು ನಿರ್ವಹಿಸಿ, ಮುಂದಿನ ತನಿಖೆಯನ್ನು ಕುಷ್ಟಗಿ ಸಿಪಿಐ ಯಶವಂತ ಎಚ್. ಬಿಸನಳ್ಳಿ ಅವರು ನಿರ್ವಹಿಸಿದ್ದು, ತನಿಖೆಯಲ್ಲಿ ಆರೋಪಿತನ ಮೇಲಿನ ಆರೋಪಣೆಗಳು ಮೇಲ್ನೋಟಕ್ಕೆ ಸಾಭಿತಾಗಿದ್ದರಿಂದ ಆರೋಪಿತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಈ ಪ್ರಕರಣವು ಸ್ಪೇ.ಎಸ್‌ಸಿ (ಪೋಕ್ಸೊ) ಸಂ: 60/2023 ರಲ್ಲಿ ದಾಖಲಾಗಿದ್ದು, ವಿಚಾರಣೆಯನ್ನು ನಡೆಸಿದ ಮಾನ್ಯ ನ್ಯಾಯಾಲಯ ಆರೋಪಿತನ ಮೇಲಿನ ಆರೋಪಣೆಗಳು ಸಾಭೀತಾಗಿವೆ ಎಂದು 20 ವರ್ಷಗಳ ಜೈಲು ಶಿಕ್ಷೆ ಹಾಗೂ ರೂ. 10,000 ಗಳ ದಂಡವನ್ನು ಭರಿಸುವಂತೆ ಆದೇಶಿಸಿ ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ತ್ವರಿತ ವಿಲೇವಾರಿ (ಪೋಕ್ಸೊ) ನ್ಯಾಯಾಲಯದ ನ್ಯಾಯಾಧೀಶರಾದ ಕುಮಾರ ಡಿ. ಕೆ ಕೊಪ್ಪಳ 2025ರ ಆಗಸ್ಟ 4 ರಂದು ತೀರ್ಪು ಹೊರಡಿಸಿರುತ್ತಾರೆ.
ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಗೌರಮ್ಮ ದೇಸಾಯಿ ಅವರು ಈ ಪ್ರಕರಣ ನಡೆಸಿ ವಾದ ಮಂಡಿಸಿದ್ದರು. ತಾವರಗೇರಾ ಪೋಲಿಸ ಠಾಣೆಯ ಸಿಬ್ಬಂದಿ ರಂಗನಾಥ ಹಾಗೂ ವಿರೇಶ ಅವರು ಸಾಕ್ಷಿದಾರರನ್ನು ನ್ಯಾಯಾಲಯಕ್ಕೆ ಹಾಜರಪಡಿಸುವಲ್ಲಿ ಸಾಕಷ್ಟು ಸಹಕರಿಸಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕರು (ಪೋಕ್ಸೊ) ಕಛೇರಿಯ ಪ್ರಕಟಣೆ ತಿಳಿಸಿದೆ.