ಬೆಂಗಳೂರು: ಅತಿಥಿ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಇಲಾಖೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಇರುವ ಬೋಧಕ ಸಿಬ್ಬಂದಿ ಹುದ್ದೆಗಳ ಜಾಗದಲ್ಲಿ ಕೆಲಸ ಮಾಡುತ್ತಿರುವ ಅತಿಥಿ ಶಿಕ್ಷಕರಿಗೆ ಗೌರವಧನ (ಸಂಭಾವನೆ) ಪಾವತಿ ಮಾಡಲು ಅನುದಾನ ಬಿಡುಗಡೆಗೊಳಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
5 ತಿಂಗಳ ಗೌರವಧನ
ರಾಜ್ಯದ ತಾಲ್ಲೂಕು ಪಂಚಾಯತಿ ವ್ಯಾಪ್ತಿಯ ಶಿಕ್ಷಣ ಇಲಾಖೆಯಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಖಾಲಿ ಆಗಿರುವ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರ ಜೂನ್-2025 ರಿಂದ ಅಕ್ಟೋಬರ್ ವರೆಗಿನ ಗೌರವಧನ ಪಾವತಿಸಲು ರೂ.20416.20 ಲಕ್ಷಗಳನ್ನು ವ ಅನುದಾನದಿಂದ ಬಿಡುಗಡೆ ಮಾಡಲು ಅನುಮೋದನೆ ನೀಡಲಾಗಿದೆ.
ಗೌರವ ಧನ ಹೆಚ್ಚಿಸಿದ್ದ ಸರ್ಕಾರ
ರಾಜ್ಯ ಸರ್ಕಾರ ಈ ಮೊದಲು ಸರ್ಕಾರಿ ಶಾಲೆಯ ಅತಿಥಿ ಶಿಕ್ಷರ ಹಾಗೂ ಸರ್ಕಾರಿ ಪಿಯು ಕಾಲೇಜುಗಳ ಅತಿಥಿ ಉಪನ್ಯಾಸಕರ ತಿಂಗಳ ಗೌರವಧನವನ್ನು ಹೆಚ್ಚಿಸಿ ಇದೀಗ ಅಧಿಕೃತ ಆದೇಶವನ್ನು ಹೊರಡಿಸಿತ್ತು. ಸರ್ಕಾರಿ ಪ್ರಾಥಮಿಕ ಶಾಲಾ ಅತಿಥಿ ಶಿಕ್ಷಕರಿಗೆ ಈ ಹಿಂದಿನ ರೂ.10 ಸಾವಿರ ಬದಲಿಗೆ ಇದೀಗ ರೂ.12 ಸಾವಿರ ಸಿಗಲಿದೆ. ಇನ್ನು ಸರ್ಕಾರಿ ಪ್ರೌಢ ಶಾಲಾ ಅತಿಥಿ ಶಿಕ್ಷಕರಿಗೆ ಈ ಹಿಂದೆ ಸಿಗುತ್ತಿದ್ದ ರೂ.10,500 ಬದಲಿಗೆ ಈಗ ರೂ.12,500 ಮಾಸಿಕ ದೊರೆಯಲಿದೆ. ಅದೇ ರೀತಿ ಸರ್ಕಾರಿ ಪದವಿಪೂರ್ವ ಕಾಲೇಜು ಅತಿಥಿ ಉಪನ್ಯಾಸಕರಿಗೆ ರೂ.12 ಸಾವಿರ ಬದಲಿಗೆ ಇನ್ಮುಂದೆ ರೂ.14 ಸಾವಿರ ಮಾಸಿಕವಾಗಿ ಕೊಡುವಂತೆ ಘೋಷಣೆ ಮಾಡಿದೆ.
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ನೀಡುತ್ತಿರುವ ಮಾಸಿಕ ಗೌರವಧನ ಹಣಕಾಸು ಇಲಾಖೆಯ ಅನುಮೋದನೆ ಪಡೆದ ನಂತರ ಹೆಚ್ಚಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಅವರು ಕಳೆದ ವರ್ಷ ಡಿಸೆಂಬರ್ನಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಭರವಸೆ ನೀಡಿದ್ದರು.
51 ಸಾವಿರ ಅತಿಥಿ ಶಿಕ್ಷಕರ ನೇಮಕ
ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರಿಸಲು 2025-26ನೇ ಸಾಲಿನಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಸರ್ಕಾರ ಒಪ್ಪಿಗೆ ನೀಡಿದೆ. ಪ್ರಾಥಮಿಕ ಶಾಲೆಗಳಿಗೆ 40 ಸಾವಿರ, ಪ್ರೌಢಶಾಲೆಗಳಿಗೆ 11 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ನಿರ್ಧರಿಸಲಾಗಿದೆ.
ನೇಮಕಾತಿಗಳು ತಾತ್ಕಾಲಿಕ ಸ್ವರೂಪದ್ದಾಗಿದ್ದು, ನಿಯಮಿತ ಶಿಕ್ಷಕರನ್ನು ನೇಮಕ ಮಾಡಿಕೊಳ್ಳುವವರೆಗೆ ಅಥವಾ ಶೈಕ್ಷಣಿಕ ವರ್ಷದ ಅಂತ್ಯದವರೆಗೆ ಇರುತ್ತದೆ. ಬೋಧನಾ ಸಿಬ್ಬಂದಿಯಲ್ಲಿನ ತಕ್ಷಣದ ಅಂತರವನ್ನು ಕಡಿಮೆ ಮಾಡಲು ಮತ್ತು ಶಿಕ್ಷಕರ ಕೊರತೆಯಿಂದಾಗಿ ನಮ್ಮ ವಿದ್ಯಾರ್ಥಿಗಳು ತೊಂದರೆ ಅನುಭವಿಸದಂತೆ ನೋಡಿಕೊಳ್ಳಲು ಈ ನಿರ್ಧಾರವು ನಿರ್ಣಾಯಕವಾಗಿದೆ ಎಂದು ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.