ಬೆಂಗಳೂರು.31.ಜುಲೈ.25:- ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹೆಚ್ಚುವರಿ ಕಾರ್ಯಭರಕ್ಕೆ 2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಪ್ರಕ್ರಿಯೆ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಉಲ್ಲೇಖದನ್ವಯ ಆಯ್ಕೆ ಪ್ರಕ್ರಿಯೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿತ್ತು,
ಅದರಂತೆ ಈಗಾಗಲೇ ಅತಿಥಿ ಉಪನ್ಯಾಸಕರ ಸೇವೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಅನ್-ಲೈನ್ ಅರ್ಜಿಯನ್ನು Edit ಮಾಡಲು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಲು ದಿನಾಂಕ:31.07.2025 ರಿಂದ ದಿನಾಂಕ:03.08.2025 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಮುಂದುವರೆದು, ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸಿದ ಅಭ್ಯರ್ಥಿಗಳು ಪ್ರಾಂಶುಪಾಲರಿಂದ ಸೇವಾ ಪ್ರಮಾಣ ಪತ್ರವನ್ನು ಈ ಪ್ರಕಟಣೆ ಹೊರಡಿಸಿದ ದಿನಾಂಕ:31.07.2025 ಕ್ಕೆ ಅನ್ವಯಿಸುವಂತೆ ಪಡೆದು ಅರ್ಜಿಯನ್ನು Edit ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಆನ್-ಲೈನ್ ಮೂಲಕ ಅರ್ಜಿ ಸಲ್ಲಿಸಲು/Edit ಮಾಡಲು ಇಲಾಖೆಯ ಅಂತರ್ಜಾಲ ತಾಣ https://dce.karnataka.gov.in ನ್ನು ಸಂಪರ್ಕಿಸುವುದು. ಉಳಿದಂತೆ ಉಲ್ಲೇಖಿತ ಪ್ರಕಟಣೆಯಲ್ಲಿನ ಅಂಶಗಳು ಯಥಾವತ್ತಾಗಿ ಮುಂದುವರೆಯುತ್ತದೆ.
