ಮೈಸೂರು .03. ಡಿಸೆಂಬರ್.25: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೨೦೨೫-೨೦೨೬ನೇ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಾತಿ ನಿಯಮಬಾಹಿರ ಕೌನ್ಸಲಿಂಗ್ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ
ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ನಿಯಮಬಾಹಿರ ಆಯ್ಕೆಯ ಕೌನ್ಸಲಿಂಗ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಬುಧವಾರದಿಂದ (ಡಿ.೩)ನಿತ್ಯ ಬೆಳಿಗ್ಗೆ ೧೧ ರಿಂದ ಮಧ್ಯಾಹ್ನ ೧.೩೦ ರವರೆಗೆ ಹುಣಸೂರು ರಸ್ತೆಯ ಕಾಲೇಜು ಶಿಕ್ಷಣ ಇಲಾಖೆ ಕಚೇರಿ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ತಿಳಿಸಿದೆ.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ನೂತನ ಸಾಲಿಗೆ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕೌನ್ಸಿಲಿಂಗ್ ನಡೆಸುವ ವೇಳೆ ಈ ಹಿಂದೆ ಸೇವೆ ಸಲ್ಲಿಸಿದ್ದ ಅತಿಥಿ ಉಪನ್ಯಾಸಕರನ್ನು ಯುಜಿಸಿ ಅರ್ಹತೆ ಪಡೆದಿಲ್ಲವೆಂದು ಪರಿಗಣಿಸಿ ಅವರನ್ನು ಕೈ ಬಿಡಲಾಗಿದೆ ಎಂದು ರಾಜ್ಯ ಸಮನ್ವಯ ಸಮಿತಿಯ ಗೌರವಾಧ್ಯಕ್ಷ ಹನುಂತೇಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ರಾಜ್ಯದ ೪೪೦ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೧೦, ೧೫, ೨೦ ವರ್ಷಗಳಿಂದ ಸುಮಾರು ೧೦,೯೭೨ ಅತಿಥಿ ಉಪನ್ಯಾಸಕರು ಅತ್ಯಂತ ಕನಿಷ್ಠ ಗೌರವಧನ ಪಡೆದು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಪ್ರಸಕ್ತ ಸಾಲಿನಲ್ಲಿ ಯುಜಿಸಿ ಅರ್ಹತೆ ಪಡೆದಿಲ್ಲವೆಂಬ ಕಾರಣಕ್ಕಾಗಿ ೬,೯೦೪ ಅತಿಥಿ ಉಪನ್ಯಾಸಕರನ್ನು ಕೆಲಸದಿಂದ ತೆಗೆದು ಹಾಕಲು, ಹೊಸದಾಗಿ ನೇಮಕಾತಿ ಪ್ರಕ್ರಿಯೆಗೆ ಕ್ರಮ ಕೈಗೊಳ್ಳಲಾಗಿದೆ. ಇದು ಸರಿಯಲ್ಲ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.
ಈಗಾಗಲೇ ಸೇವೆ ಸಲ್ಲಿಸಿದವರ ವಯೋಮಿತಿ ಮೀರಿದೆ. ಇವರು ಕೆಲಸ ಕಳೆದುಕೊಂಡರೆ ಅವರ ಜೀವನ ಅತಂತ್ರವಾಗುತ್ತದೆ. ಇವರನ್ನೇ ಅವಲಂಬಿಸಿರುವ ಕುಟುಂಬ ನಿರ್ವಹಣೆ ಸಾಧ್ಯವಾಗದಂತಾಗುತ್ತದೆ. ಹೀಗಾಗಿ ಕಾಲೇಜು ಶಿಕ್ಷಣ ಇಲಾಖೆ ತಾನು ಕೈಗೊಂಡಿರುವ ನಿಯಮ ಬಾಹಿರ ಕೌನ್ಸಿಲಿಂಗ್ ಪ್ರಕ್ರಿಯೆಯನ್ನು ಕೈಬಿಡಬೇಕು. ನಿಯಮ ಮಾರ್ಪಾಡು ಮಾಡಿ, ಈಗಾಗಲೇ ಸೇವೆ ಸಲ್ಲಿಸುತ್ತಿರುವವರನ್ನೇ ಮುಂದುವರಿಸಬೇಕೆಂದು ಒತ್ತಾಯಿಸಿ, ರಾಜ್ಯದಾದ್ಯಂತ ನಡೆಯುತ್ತಿರುವಂತೆ ಪ್ರತಿಭಟನೆ ಇಲ್ಲಿಯೂ ನಡೆಯಲಿದೆ ಎಂದು ತಿಳಿಸಿದರು.
ಅತಿಥಿ ಉಪನ್ಯಾಸಕರ ರಾಜ್ಯ ಸಮನ್ವಯ ಸಮಿತಿ ಮೈಸೂರು ಜಿಲ್ಲಾಧ್ಯಕ್ಷ ಡಾ.ಜಿ. ಮಹೇಶ್, ಅತಿಥಿ ಉಪನ್ಯಾಸಕರಾದ ಆಶಾ, ಶಿವೇಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು.





Any questions related to ಅತಿಥಿ ಉಪನ್ಯಾಸಕರ ನೇಮಕಾತಿ ನಿಯಮಬಾಹಿರ ಕೌನ್ಸಲಿಂಗ್ ಪ್ರಕ್ರಿಯೆ ಸ್ಥಗಿತಕ್ಕೆ ಆಗ್ರಹ?