ಯುವಜನತೆ ದುಶ್ಚಟಗಳಿಗೆ ಬಲಿಯಾಗದಿರಿ- ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ

ವ್ಯಸನ ಮುಕ್ತ ದಿನಾಚರಣೆ

ಕೊಪ್ಪಳ.01.ಆಗಸ್ಟ.25: ಇಂದಿನ ದಿನಮಾನಗಳಲ್ಲಿ ಯುವಜನತೆ ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಹಾಗಾಗಿ ಯುವಜನರು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಹೇಳಿದರು.ಅವರು ಶುಕ್ರವಾರ ಕೊಪ್ಪಳ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ತರಬೇತಿ ಕೇಂದ್ರ, ಪದವಿ ಪೂರ್ವ ಶಿಕ್ಷಣ ಇಲಾಖೆ, ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ, ಆರೋಗ್ಯ ಇಲಾಖೆ, ವೈದ್ಯಕೀಯ ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಕೊಪ್ಪಳ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು ಇವರ ಸಹಯೋಗದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಡಾ. ಮಹಾಂತ ಶಿವಯೋಗಿಗಳು ಮಾದಕ ವಸ್ತುಗಳ ವಿರೋಧದ ಬಗ್ಗೆ ದೇಶಾದ್ಯಂತ ಜಾಗೃತಿಯನ್ನುಂಟು ಮಾಡಿದ್ದರು. ಅವರು ಜೋಳಿಗೆ ಯಾತ್ರೆಯನ್ನು ಕೈಗೊಂಡು ಜನ ಸಮುದಾಯದ ಮುಂದೆ ಹೋಗಿ, ನಿಮ್ಮಲ್ಲಿ ಯಾವುದೇ ದುಶ್ಚಟಗಳಿದ್ದರೆ, ಅವುಗಳನ್ನು ನನ್ನ ಜೋಳಿಗೆಯಲ್ಲಿ ಹಾಕಿ ಉತ್ತಮ ವ್ಯಕ್ತಗಳಾಗಿ ಬಾಳಬೇಕೆಂದು ಸಮಾಜಕ್ಕೆ ಸಂದೇಶವನ್ನು ನೀಡಿದ್ದರು. ಅಸಂಖ್ಯಾತ ಜನರ ದುಶ್ಚಟಗಳನ್ನು ದೂರ ಮಾಡುವ ಮೂಲಕ ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಆಂದೋಲನದ ಹರಿಕಾರರಾಗಿದ್ದಾರೆ. ಅವರ ಸ್ಮರಣಾರ್ಥವಾಗಿ ಇಂದು ವ್ಯಸನ ಮುಕ್ತ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.

ಭಾರತವು ಸುಸಂಸ್ಕೃತವಾದ ದೇಶವಾಗಿದ್ದು, ನಮ್ಮಲ್ಲಿ ಮಾದಕ ವಸ್ತುಗಳ ಉತ್ಪಾದನೆಗೆ ಅವಕಾಶವಿಲ್ಲವಾದರು ಸಹ ಡ್ರಗ್ಸ್, ಅಫೀಂ, ಗಾಂಜಾ ದಂತಹ ಹಲವಾರು ಮಾದಕ ವಸ್ತುಗಳು ಅನಧೀಕೃತವಾಗಿ ಅಲ್ಲಲ್ಲಿ ಸಿಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಮಾದಕ ವಸ್ತುಗಳ ಸೇವನೆ ಮಾಡುವುದು ಮತ್ತು ಸೇವನೆ ಮಾಡುತ್ತಿರುವವರ ಬಗ್ಗೆ ತಿಳಿದು ಸುಮ್ಮನಿರುವುದು ಸಹ ತಪ್ಪಾಗಿದ್ದು, ಇವುಗಳಿಗೆ ಕಾನೂನಿನಲ್ಲಿ ಶಿಕ್ಷೆಯಿದೆ. ಮಾದಕ ವಸ್ತುಗಳ ಸೇವನೆಯಿಂದಾಗಿ ಕುಟುಂಬದ ಸಂಬಂಧಗಳಲ್ಲಿ ಮತ್ತು ಸ್ನೇಹದಲ್ಲಿಯೂ ತೊಡಕು ಉಂಟಾಗುತ್ತವೆ. ವಿದ್ಯಾರ್ಥಿಗಳು ನಮ್ಮ ದೇಶದ ಭವ್ಯ ಪ್ರಜೆಗಳಾಗಿದ್ದು, ಯಾರು ಸಹ ಮಾದಕ ವಸ್ತುಗಳ ಸೇವನೆಯಂತಹ ದುಶ್ಚಟಗಳಿಗೆ ಒಳಗಾಗಬಾರದು ಮತ್ತು ಇತರರು ದುಶ್ಚಟಗಳಿಗೆ ಬಲಿಯಾಗದಂತೆ ತಡೆಯಬೇಕು. ಇಂದಿನ ಕಾರ್ಯಕ್ರಮದಲ್ಲಿ ಪ್ರತಿಜ್ಞೆ ಸ್ವೀಕರಿಸಿದಂತೆ ಎಲ್ಲರೂ ನಡೆಯಬೇಕು ಎಂದು ಹೇಳಿದರು.

ಮಂಗಳೂರು ಗ್ರಾಮದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಪ್ರಭುರಾಜ ಕೆ. ನಾಯಕ್ ಅವರು ಕಾರ್ಯಕ್ರಮದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಡಾ.ಮಹಾಂತ ಶಿವಯೋಗಿಗಳು ಈ ನಾಡಿನ ದೊಡ್ಡ ಸಂತರು, ಸಮಾಜ ಸುಧಾರಕರು, ಸಮಾಜದಲ್ಲಿರುವಂತಹ ಹಲವಾರು ಸಮಸ್ಯೆಗಳನ್ನು ಹುಡುಕಿ ಅವುಗಳಿಗೆ ಪರಿಹಾರ ನೀಡಿದ್ದರು.

ಮುಖ್ಯವಾಗಿ ಜಾತಿ ವ್ಯವಸ್ಥೆ, ವಿಧವಾ ವ್ಯವಸ್ಥೆ ಸೇರಿದಂತೆ ಅಸ್ಪೃಶ್ಯತೆ ಸಮಸ್ಯೆ ಹಾಗೂ ಸಮಾಜದಲ್ಲಿ ಮದ್ಯಪಾನ ಮತ್ತು ಮಾದಕ ವಸ್ತುಗಳ ಸೇವನೆ ಮಾಡುವಂತಹ ಜನರ ಮುಂದೆ ಹೋಗಿ ಅವುಗಳನ್ನು ತೊಡೆದು ಹಾಕಲು ಶ್ರಮಿಸಿದ್ದರು. ಡಾ. ಮಹಾಂತ ಶಿವಯೋಗಿಗಳು ಗ್ರಾಮವೊಂದರಲ್ಲಿ ಭಿಕ್ಷೆಗೆ ತೆರಳಿದ್ದಾಗ ಕುಡಿತದ ಚಟದಿಂದ ವ್ಯಕ್ತಿ ಮೃತಪಟ್ಟು, ಆತನ ಹೆಂಡತಿ, ಮಕ್ಕಳು, ಕುಟುಂಬ ಸಂಕಷ್ಟಕ್ಕೆ ಸಿಲುಕಿದ್ದನ್ನು ನೋಡಿದ ಶ್ರೀಗಳು, ಇಂತಹ ದುಶ್ಚಟಗಳೇ ಸಮಾಜದಲ್ಲಿರುವ ಬಹುದೊಡ್ಡ ಸಮಸ್ಯೆಗಳಾಗಿದ್ದು, ಅವುಗಳನ್ನು ಹೋಗಲಾಡಿಸಬೇಕೆಂದು ನಿರ್ಧರಿಸಿ ಅಂದಿನಿಂದ ಸಾರ್ವಜನಿಕರಲ್ಲಿನ ದುಶ್ಚಟಗಳನ್ನು ಭಿಕ್ಷೆಯಾಗಿ ತಮ್ಮ ಜೋಳಿಗೆಗೆ ಹಾಕಿಕೊಂಡು ಜನರನ್ನು ದುಶ್ಚಟಗಳಿಂದ ಮುಕ್ತಗೊಳಿಸುವ ಸತ್ಕಾರ್ಯವನ್ನು ಶ್ರೀಗಳು ಮಾಡಿದರು ಎಂದರು.

ಯುವ ಜನರನ್ನು ಮದ್ಯಪಾನ ಮತ್ತು ಮಾದಕ ಪದಾರ್ಥಗಳಿಂದ ವಿಮೋಚನೆಗೊಳಿಸುವುದು ರಾಷ್ಟ್ರದ ಮೂಲ ಜಾವಾಬ್ದಾರಿಯಾಗಿದೆ ಎಂದು ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು 47ನೇ ಆರ್ಟಿಕಲ್‌ನಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ತಮಗೆ ಅಧಿಕಾರ ಸಿಕ್ಕಿದ್ದರೆ ಈ ದೇಶದಲ್ಲಿ ಮದ್ಯಪಾನವನ್ನು ನಿಷೇಧಿಸುವುದಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು ಹೇಳಿದ್ದರು.

ವ್ಯಸನ ರಹಿತ ಬಧುಕಿನಲ್ಲಿ ಹಾಗೂ ಶಿಶ್ತುಬದ್ಧ ಬಧುಕಿನಲ್ಲಿ ಮನುಷ್ಯನಿಗೆ ಹೆಚ್ಚು ನೆಮ್ಮದಿ ಸಿಗುತ್ತದೆ. ಮಾನಸಿಕ ಶಕ್ತಿಗೆ ಒಳ್ಳೆಯ ಹವ್ಯಾಸಗಳನ್ನು ನೀಡಿದರೆ, ಆ ಹವ್ಯಾಸಗಳು ನಮಗೆ ಮುಂದೆ ಅದ್ಬುತ ಶಕ್ತಿಯಾಗಿ ಸಮಾಜ ಗುರುತಿಸುವಂತಹ ವ್ಯಕ್ತಿಯನ್ನಾಗಿಸುತ್ತವೆ. ನಾವೆಲ್ಲರೂ ವೈಯಕ್ತಿಕವಾಗಿ ದುಶ್ಚಟಗಳಿಂದ ದೂರವಿರೋಣ. ನಂತರ ನಮ್ಮ ಸುತ್ತಲಿನ ಜನರನ್ನು ದುಶ್ಚಟಗಳಿಂದ ದೂರವಿಡಲು ಶ್ರಮಿಶೋಣ ಎಂದು ಹೇಳಿದರು.


ಕೊಪ್ಪಳ ಜಿಲ್ಲಾಸ್ಪತ್ರೆಯ ಮನೋವೈದ್ಯರಾದ ಡಾ. ಲಕ್ಷ್ಮೀದೇವಿ ಪಾಟೀಲ್ ಅವರು ಮಾತನಾಡಿ, ದುಶ್ಚಟಗಳಿಂದ ಮನಸ್ಸು ವಿಕೃತಿಗೊಂಡು ಅಪರಾಧಿಕ ಕೃತ್ಯಗಳಿಗೆ ಪ್ರೇರೇಪಿಸುತ್ತದೆ. ಇಂತಹ ವಿಷಯಗಳು ಬರೀ ಒಬ್ಬ ವ್ಯಕ್ತಿಗೆ ಮಾತ್ರವಲ್ಲ ಆ ವ್ಯಕ್ತಿಯ ಕುಟುಂಬ, ಊರು, ಸಮಾಜ, ದೇಶಕ್ಕೆ ಮಾರಕವಾಗುತ್ತವೆ. ಇತ್ತೀಚೆಗೆ ಕಾಲೇಜು ವಿದ್ಯಾರ್ಥಿಗಳು ಮಾದಕವಸ್ತುಗಳಿಗೆ ದಾಸರಾಗುತ್ತಿದ್ದಾರೆ.

ಇದನ್ನು ತಡೆಗಟ್ಟಲು ನಾವು ನೀವು ಮಾದಕ ವಸ್ತುಗಳಿಂದ ದೂರ ಇರಬೇಕು. ನಮ್ಮ ಜಿಲ್ಲೆಯಲ್ಲಿ ಜಿಲ್ಲಾ ಮಾಸಿಕ ಆರೋಗ್ಯ ಕಾರ್ಯಕ್ರಮಗಳು ನಡೆಯುತ್ತಿದ್ದು, ಅದರ ಸದುಪಯೋಗ ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಹೇಳಿದರು.
*ಪ್ರತಿಜ್ಞಾವಿಧಿ:* ವ್ಯಸನ ಮುಕ್ತ ದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲರಿಗೂ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ ಅವರು ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು.

ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲಾ ತರಬೇತಿ ಕೇಂದ್ರದ ಪ್ರಾಚಾರ್ಯರಾದ ಕೃಷ್ಣಮೂರ್ತಿ ದೇಸಾಯಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಪರಶುರಾಮ ಶೆಟ್ಟಪ್ಪನವರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಡಾ. ಜಿ.ಸುರೇಶ, ಡಾ. ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾದ ಪುಷ್ಪಲತಾ, ಕೊಪ್ಪಳ ಜಿಲ್ಲಾ ಮಾನಸಿಕ ಕಾರ್ಮಕ್ರಮ ಅನುಷ್ಠಾನಾಧಿಕಾರಿ ಡಾ. ಪ್ರಕಾಶ ಹೆಚ್., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ ಹಾಗೂ ಭಾಗ್ಯನಗರದ ಜ್ಞಾನಬಂಧು ಪಿಯು ಕಾಲೇಜು, ನವಚೇತನ ಪಿಯು ಕಾಲೇಜು, ಕಿಡದಾಳನ ಶಾರದ ಇಂಟರ್ ನ್ಯಾಷ್ನಲ್ ಶಾಲೆಯ ಮಕ್ಕಳು, ಕೊಪ್ಪಳದ ಕಿಮ್ಸ್ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮತ್ತು ವಾರ್ತಾ ಇಲಾಖೆ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

prajaprabhat

Recent Posts

ಅತಿಥಿ ಉಪನ್ಯಾಸಕರ ನೇಮಕಾತಿಯಲ್ಲಿ ಎಲ್ಲಾ ಷರತ್ತುಗಳನ್ನು ಇವರೇ ಒಪ್ಪಿ ಒಳ ಬಂದಿರುತ್ತಾರೆ, ಈಗ ಇವರೇ ಪ್ರತಿಭಟಿಸುತ್ತಾರೆ,

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಹತೆಗಳು ಸಾಮಾನ್ಯವಾಗಿ ಸ್ನಾತಕೋತ್ತರ ಪದವಿ, ನೆಟ್/ಕೆ-ಸೆಟ್/ಪಿಎಚ್.ಡಿ. ಮತ್ತು ಹಿಂದಿನ ಅನುಭವವನ್ನು ಆಧರಿಸಿರುತ್ತವೆ. ಕೆಲವು ಸಂದರ್ಭಗಳಲ್ಲಿ, ವೃತ್ತಿಪರ…

2 hours ago

ಮಹಾನಗರ ಪಾಲಿಕೆ’ಗೆ 344 ಹೊಸ ಹುದ್ದೆ ಮಂಜೂರು!

ಬೀದರ.02.ಆಗಸ್ಟ್.25:- ಬೀದರ್‌ ನಗರಸಭೆಯನ್ನು ಮೇಲ್ದರ್ಜೆಗೇರಿಸಿದ  ಈ ಹಿಂದೆ ಮಂಜೂರಾದ ಹುದ್ದೆಗಳ ಜೊತೆಗೆ ಷರತ್ತಿಗೊಳಪಟ್ಟು ವಿವಿಧ ವೃಂದಗಳ 344 ಹೊಸ ಹುದ್ದೆಗಳನ್ನು…

8 hours ago

71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟ; ಶಾರುಖ್, ಮ್ಯಾಸ್ಸಿ ಅತ್ಯುತ್ತಮ ನಟ, ರಾಣಿ ಮುಖರ್ಜಿ ಅತ್ಯುತ್ತಮ ನಟಿ ಪ್ರಶಸ್ತಿ

ಹೊಸ ದೆಹಲಿ.02.ಆಗಸ್ಟ್.25:- 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಹಿಂದಿ ಚಿತ್ರ 12ನೇ ಫೇಲ್ ಅತ್ಯುತ್ತಮ ಚಿತ್ರ ಪ್ರಶಸ್ತಿಯನ್ನು ಗೆದ್ದಿದೆ. ಇಂದು…

8 hours ago

ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಕೇಂದ್ರ ಕ್ರೀಡಾ ಸಚಿವ ಮನ್ಸುಖ್ಸ   ಸನ್ಮಾನಿಸಿದರು

ಹೊಸ ದೆಹಲಿ.02.ಆಗಸ್ಟ್.25:- ಕೇಂದ್ರ ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ ಇಂದು ನವದೆಹಲಿಯಲ್ಲಿ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಅವರನ್ನು ಸನ್ಮಾನಿಸಿದರು.…

8 hours ago

ಕೇಂದ್ರ ಸಚಿವ ಗಡ್ಕರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ಪ್ರದಾನ

ಪುಣೆ.02.ಆಗಸ್ಟ್.25:- ಪುಣೆಯಲ್ಲಿ ಇಂದು ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರಿಗೆ 43ನೇ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು…

8 hours ago

ಮಹಾರಾಷ್ಟ್ರ: ದಹಿ ಹಂಡಿಯ ಗೋವಿಂದರಿಗೆ ವಿಮಾ ರಕ್ಷಣೆಯನ್ನು ಸರ್ಕಾರ ಘೋಷಿಸಿದೆ.

ಮುಂಬೈ ಗೋಕುಲಾಷ್ಟಮಿಯ ಸಂದರ್ಭದಲ್ಲಿ ಮುಂಬರುವ ದಹಿ ಹಂಡಿ ಉತ್ಸವದಲ್ಲಿ ಭಾಗವಹಿಸುವ 1.5 ಲಕ್ಷ ಗೋವಿಂದರಿಗೆ ಮಹಾರಾಷ್ಟ್ರ ಸರ್ಕಾರ ವಿಮಾ ರಕ್ಷಣೆಯನ್ನು…

14 hours ago