ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಮುಖ್ಯ ಉದ್ದೇಶ – ಸಚಿವ ಎಸ್.ಮಧು ಬಂಗಾರಪ್ಪ

ಕೊಪ್ಪಳ.08.ಜುಲೈ.25: ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂಬುದು ನಮ್ಮ ಸರ್ಕಾರದ ಮುಖ್ಯ ಉದ್ದೇಶವಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವರಾದ ಎಸ್.ಮಧು ಬಂಗಾರಪ್ಪ ಹೇಳಿದರು.

ಅವರು ಸೋಮವಾರ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲ್ಲೂಕಿನ ಹಿರೇವಂಕಲಕುಂಟಾ ಗ್ರಾಮದಲ್ಲಿನ ನೂತನ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಮತ್ತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಸಾಕಷ್ಟು ಕೆಲಸಗಳು ಆಗುತ್ತಿವೆ. ರಾಜ್ಯ ಸರ್ಕಾರ ಮತ್ತು ಅಜೀಮ್ ಪ್ರೇಮಜಿ ಫೌಂಡೇಶನ್ ಸಹಯೋಗದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ವಾರದಲ್ಲಿ ಆರು ದಿನ ಮೊಟ್ಟೆ ಮತ್ತು ಬಾಳೆ ಹಣ್ಣುಗಳನ್ನು ವಿತರಣೆ ಮಾಡಲಾಗುತ್ತಿದೆ. ಇದರ ಜೊತೆಗೆ ಮಕ್ಕಳಿಗೆ ಬಿಸಿಊಟ, ಹಾಲು, ಪಠ್ಯ ಪುಸ್ತಕ, ಸಮವಸ್ತ್ರದೊಂದಿಗೆ ಶೂಗಳು ಮತ್ತು ಸಾಕ್ಸ್ ಹಾಗೂ ವಿಶೇಷವಾಗಿ ಮಕ್ಕಳ ಪೌಷ್ಠಿಕ ಬೆಳವಣಿಗೆಗೆ ರಾಗಿ ಮಾಲ್ಟ್ ಕೊಡಲಾಗುತ್ತಿದೆ. ಒಂದು ಸಮೀಕ್ಷಾ ವರದಿ ಪ್ರಕಾರ ರಾಜ್ಯದಲ್ಲಿ ಕಳೆದ ಎರಡು ಮೂರು ವರ್ಷಗಳಲ್ಲಿ ಮಕ್ಕಳ ಪೌಷ್ಠಿಕತೆ ಉನ್ನತ ಸ್ಥಾನವನ್ನು ಪಡೆದಿದೆ. ಉತ್ತಮ ಶಿಕ್ಷಕರು ಸರ್ಕಾರಿ ಶಾಲೆಗಳಲ್ಲಿದ್ದು, ಇಲ್ಲಿ ಓದುವ ಮಕ್ಕಳೆಲ್ಲ ಪುಣ್ಯವಂತರು.

ಸರ್ಕಾರಿ ಶಾಲೆಗಳಲ್ಲಿ ಓದಿದವರೆಲ್ಲ ಉನ್ನತ ಸ್ಥಾನಗಳಲ್ಲಿದ್ದಾರೆ. ಇಂದಿನ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಹ ಓದಿರುವುದು ಒಂದು ಸರ್ಕಾರಿ ಶಾಲೆಯಲ್ಲಿಯೆ. ಸರ್ಕಾರಿ ಶಾಲೆಗಳ ಮಕ್ಕಳು ಚೆನ್ನಾಗಿ ಓದಿ ಬುದ್ದಿವಂತರಾಗಬೇಕು. ನಮ್ಮ ಸರ್ಕಾರ ಬಂದ ನಂತರ ಕೇವಲ 11 ತಿಂಗಳಲ್ಲಿ 12,500 ಶಿಕ್ಷಕರನ್ನು ನೇಮಕ ಮಾಡಲಾಗಿದೆ.

ಹಂತ ಹಂತವಾಗಿ ಶಿಕ್ಷಕರ ಕೊರತೆಯನ್ನು ನೀಗಿಸಲಾಗುವುದು. ಮಕ್ಕಳ ಭವಿಷ್ಯಕ್ಕಾಗಿ ಬೇಕಾಗುವ ಶಿಕ್ಷಣದ ಸೌಲಭ್ಯಗಳನ್ನು ಒದಗಿಸಲು ನಮ್ಮ ಸರ್ಕಾರವು ಬದ್ಧವಾಗಿದೆ ಎಂದರು.
ಮಕ್ಕಳ ಸೇವೆ ಮಾಡಲು ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಗಳು ನನಗೆ ಶಿಕ್ಷಣ ಇಲಾಖೆಯನ್ನು ನೀಡಿದ್ದಾರೆ. ರಾಜ್ಯದಲ್ಲಿ ಕೆ.ಪಿ.ಎಸ್. ಶಾಲೆಗಳನ್ನು ಪ್ರಾರಂಭಿಸಲಿದ್ದೇವೆ ಹಾಗೂ ಅವಶ್ಯವಿರುವಲ್ಲಿ ಹೈಸ್ಕೂಲ್ ಮತ್ತು ಪಿಯುಸಿ ಕಾಲೇಜುಗಳನ್ನು ಮಾಡಿಕೊಡಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅನುಧಾನದಲ್ಲಿ ಶೇ. 25ರಷ್ಟನ್ನು ಶಿಕ್ಷಣಕ್ಕಾಗಿಯೇ ಮೀಸಲಿಡಲಾಗಿದೆ.

ಪರೀಕ್ಷೆಯಲ್ಲಿ ಕಾಪಿ ಮಾಡುವುದನ್ನು ತಡೆಯಲು ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು, ಇದರಿಂದ ಕೆಲ ಮಕ್ಕಳು ಪೇಲ್ ಆಗುತ್ತಿರಬಹುದು. ಆದರೆ, ಭವಿಷ್ಯದಲ್ಲಿ ಮಕ್ಕಳು ಯಾವುದೇ ರೀತಿಯಲ್ಲಿ ಸೋಲುವುದಿಲ್ಲ. ಮೂರು ಪರೀಕ್ಷಾ ಸೂತ್ರವನ್ನು ಜಾರಿಗೆ ತರಲಾಗಿದ್ದು, ಈ ವ್ಯವಸ್ಥೆಯ ಮಹತ್ವವು ಮುಂಬರುವ ದಿನಗಳಲ್ಲಿ ತಿಳಿಯಲಿದೆ. ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಮಕ್ಕಳಲ್ಲಿ 84,400 ಕ್ಕಿಂತಲು ಹೆಚ್ಚು ಮಕ್ಕಳು ಎಸ್.ಎಸ್.ಎಲ್.ಸಿ ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಿ ಶಿಕ್ಷಣ ಇಲಾಖೆಯ ಗೌರವನ್ನು ಹೆಚ್ಚಿಸಿದ್ದಾರೆ.

ಇದರಲ್ಲಿ ಸರ್ಕಾರಿ ಶಾಲೆಗಳು ಮೊದಲ ಸ್ಥಾನದಲ್ಲಿದ್ದು, ಅನುದಾನಿತ ಮತ್ತು ಖಾಸಗಿ ಶಾಲೆಗಳು 2ನೇ ಮತ್ತು 3ನೇ ಸ್ಥಾನದಲ್ಲಿವೆ. ಸದ್ಯ 3ನೇ ಪರೀಕ್ಷೆಯು ನಡೆಯುತ್ತಿದೆ ಎಂದು ಹೇಳಿದರು.


ಇಡೀ ರಾಜ್ಯದಾದ್ಯಂತ ರೈತರ ಹೊಲಗಳು ಹಸಿರಾಗಿವೆ ಎಂಬುವುದಕ್ಕೆ ಕಾರಣ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರು 36 ರಿಂದ 37 ಲಕ್ಷ ಬೋರ್ವೆಲ್‌ಗಳಿಗೆ ಉಚಿತ ವಿದ್ಯುತ್ ನೀಡಿ, ಆರ್ಥಿಕವಾಗಿ ದುಡಿಯುವ ರೈತರ ಕೈಗಳಿಗೆ ಶಕ್ತಿ ನೀಡಿದ್ದರು. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಗೃಹಜ್ಯೋತಿ ಯೋಜನೆಯನ್ನು ಜಾರಿಗೆ ಮಾಡುವುದರ ಮೂಲಕ ಪ್ರತಿಯೊಂದು ಮನೆಗೆ ಉಚಿತ ಬೆಳಕನ್ನು ನೀಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ ಅವರು ಮಾತನಾಡಿ, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರವು ಎರಡು ವರ್ಷಗಳನ್ನು ಪೂರೈಸಿದ್ದು, ಹಲವಾರು ಜನಪರವಾದ ಕಾರ್ಯಕ್ರಮಗಳನ್ನು ಜಾರಿಗೆ ಮಾಡಲಾಗಿದೆ. ವಿಶೇಷವಾಗಿ ನಮ್ಮ ಯಲಬುರ್ಗಾ ಕ್ಷೇತ್ರದಲ್ಲಿ 16 ಹೊಸ ಶಾಲೆಗಳು ಮತ್ತು 7 ಹೊಸ ಜೂನಿಯರ್ ಕಾಲೇಜುಗಳು ಪ್ರಾರಂಭವಾಗಿದ್ದು, ಇನ್ನೊಂದು ವಾರದಲ್ಲಿ ತಲಾ ಒಂದು ಹೊಸ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಪ್ರಾರಂಭವಾಗಲಿದೆ. ಇದರ ಜೊತೆಗೆ ವಿವಿಧ ಗ್ರಾಮಗಳಲ್ಲಿ ಕಲ್ಯಾಣ ಮಂಟಪ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳನ್ನು ಸಹ ಮಂಜೂರು ಮಾಡಿಸಲಾಗಿದೆ.

ಬ್ರಿಜ್ ಕಂ ಬ್ಯಾರೆಜ್ ನಿರ್ಮಾಣ, ಕೆರೆ ತುಂಬಿಸಲು ಸಹ ಅನುದಾನವನ್ನು ನೀಡಲಾಗಿದೆ. ಒಂದು ಶಾಲೆ ಪ್ರಾರಂಭಿಸಿದ ಬಳಿಕ ಶಾಲಾ ಮುಖ್ಯಗುರುಗಳು, ಶಿಕ್ಷಕರು ಮತ್ತು ಸಿಬ್ಬಂದಿಗಳಿಗೆ ವೇತನ ಸೇರಿದಂತೆ ಒಂದು ವರ್ಷಕ್ಕೆ ಸುಮಾರು 70 ರಿಂದ 75 ಲಕ್ಷಗಳು ಖರ್ಚಾಗಲಿದ್ದು, ಈ ಅನುದಾನವನ್ನು ಸರ್ಕಾರವು ನೀಡಲಿದೆ ಎಂದರು.
ಮಧು ಬಂಗಾರಪ್ಪ ಶಿಕ್ಷಣ ಮಂತ್ರಿಗಳಾದ ನಂತರ ಉತ್ತಮ ಕೆಲಸಗಳನ್ನು ಮಾಡುತ್ತಿದ್ದಾರೆ. ಗ್ರಾಮೀಣ ಭಾಗಗಳಲ್ಲಿ ಇಂಗ್ಲೀಷ್ ಮಾಧ್ಯಮ ಶಾಲೆಗಳು ಬೇಕೆಂದು ಬಹಳಷ್ಟು ಜನರು ಒತ್ತಾಯ ಮಾಡುತ್ತಿದ್ದಾರೆ.

ಎಲ್.ಕೆ.ಜಿ ಯಿಂದ ಪಿ.ಯುಸಿ ವರೆಗೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ಗಳನ್ನು ಮಾಡಲು ಸಚಿವರು ಬಹಳಷ್ಟು ಆಸಕ್ತಿ ವಹಿಸಿದ್ದಾರೆ. ಸರ್ಕಾರದಿಂದ 500 ಕೆ.ಪಿ.ಎಸ್ ಶಾಲೆಗಳನ್ನು ಮಂಜೂರು ಮಾಡಲಾಗಿದೆ. ಇದರ ಜೊತೆಗೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಯೋಜನೆಯಡಿ 50 ಶಾಲೆಗಳನ್ನು ಮಂಜೂರು ಮಾಡಿದ್ದು, ಇದೊಂದು ಐತಿಹಾಸಿಕ ದಾಖಲೆಯಾಗಲಿದೆ.

ಪ್ರತಿ ಶಾಸಕರ ಕ್ಷೇತ್ರಕ್ಕೆ 3 ಶಾಲೆಗಳನ್ನು ನೀಡುವುದಾಗಿ ಸಚಿವರು ತಿಳಿಸಿದ್ದು, ನಮ್ಮ ಯಲಬುರ್ಗಾ ಕ್ಷೇತ್ರಕ್ಕೆ 4 ಕೆ.ಪಿ.ಎಸ್ ಶಾಲೆಗಳನ್ನು ನೀಡುವಂತೆ ನಾನು ಕೇಳಿದ್ದೇನೆ. ಕೆ.ಕೆ.ಆರ್.ಡಿ.ಬಿ ಯೋಜನೆಯಡಿ ಗುನ್ನಾಳ ಮತ್ತು ಬಿನ್ನಾಳ ಗ್ರಾಮಗಳಲ್ಲಿ ಒಂದೊoದು ಸೇರಿ ನಮ್ಮ ಕ್ಷೇತ್ರದಲ್ಲಿ ಒಟ್ಟು 6 ಕೆ.ಪಿ.ಎಸ್ ಶಾಲೆಗಳು ಮಂಜೂರಾಗಲಿವೆ. ನಮ್ಮ ಸರ್ಕಾರದಲ್ಲಿ ಯಾವುದೇ ರೀತಿಯ ಅನುದಾನದ ಕೊರತೆಯಿಲ್ಲ.

ಶಿಕ್ಷಣಕ್ಕಾಗಿಯೇ ನಮ್ಮ ಸರ್ಕಾರವು ಬಜೆಟ್‌ನಲ್ಲಿ ರೂ. 42 ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸಿದೆ ಎಂದು ಹೇಳಿದರು.

ಮಾಜಿ ಸಚಿವರಾದ ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ಮಾತನಾಡಿ, ಎಲ್ಲಾ ಅಭಿವೃದ್ಧಿಗಿಂತಲೂ ಶಿಕ್ಷಣದ ಅಭಿವೃದ್ಧಿ ಬಹಳ ಪ್ರಮುಖವಾದದ್ದು. ಯಾಕೆಂದರೆ ಶಿಕ್ಷಣ ಎಂಬುದು ಒಂದು ದೊಡ್ಡ ಅಸ್ತ್ರವಾಗಿದ್ದು, ಅದರ ಕುರಿತು ಪಾಲಕರು, ಪೋಷಕರು ಹಾಗೂ ಶಿಕ್ಷಕರು ಸರಿಯಾಗಿ ಮಕ್ಕಳಿಗೆ ಮಾಹಿತಿ ನೀಡಬೇಕು.

ಇವತ್ತು ಮೊಬೈಲ್ ಬಂದು ಮಕ್ಕಳಲ್ಲಿ ಓದುವ ಇಚ್ಚಾಸಕ್ತಿ ಕಡಿಮೆಯಾಗಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಪಾಲಕರು ಗಮನ ಹರಿಸಿ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಅವರು ಮಾತನಾಡಿ, ಯಲಬುರ್ಗಾ ಕ್ಷೇತ್ರದಲ್ಲಿ ಪ್ರತಿ ಮೂರು ಕಿಮೀ ಒಂದು ಪ್ರೌಢಶಾಲೆ ಸಿಗುತ್ತದೆ. ಪ್ರತಿಯೊಂದು ಮಗುವಿಗೆ ಶಾಲಾ ಅವಕಾಶ ಸಿಗಬೇಕೆಂಬ ಮಹದಾಶೆಯಿಂದ ಹಿರೇವಂಕಲಕುಂಟಾ ಗ್ರಾಮದ ಶಾಲೆಯಲ್ಲಿ 600 ಮಕ್ಕಳಿದ್ದು, ಈ ಎಲ್ಲಾ ಮಕ್ಕಳಿಗೆ ಒಂದೇ ಶಾಲೆಯಲ್ಲಿ ಕಲಿಯಲು ಕಷ್ಟವಾಗುತ್ತಿದೆ ಎಂದು ಬಸವರಾಜ ರಾಯರಡ್ಡಿ ಅವರಲ್ಲಿ ಮನವಿ ಮಾಡಿಕೊಂಡಾಗ, ಇದಕ್ಕೆ ತಕ್ಷಣ ಸ್ಪಂದಿಸಿ, ಸರ್ಕಾರಿ ಬಾಲಕಿಯರ ಪ್ರೌಢಶಾಲೆಯನ್ನು ಮಂಜೂರು ಮಾಡಿದ್ದು, ಇಂದು ಸಚಿವರಿಂದ ಉದ್ಘಾಟನೆಗೊಂಡಿದೆ.

ಈ ಶಾಲೆಯಲ್ಲಿ ಸದ್ಯ 80 ಮಕ್ಕಳು ದಾಖಲಾಗಿದ್ದು, ಮುಂದಿನ ದಿನಮಾನಗಳಲ್ಲಿ 300 ಮಕ್ಕಳು ದಾಖಲಾಗಲು ಅವಕಾಶವಿದೆ.

ಎರಡು ವರ್ಷದ ಅವಧಿಯಲ್ಲಿ ನಮ್ಮ ಜಿಲ್ಲೆಗೆ 18 ಪ್ರೌಢಶಾಲೆಗಳು, 5 ಪಿಯು ಕಾಲೇಜುಗಳು ಮತ್ತು ಮೊರಾರ್ಜಿ ಶಾಲೆಗಳು, ಪದವಿ ಕಾಲೇಜುಗಳು ಬಂದಿವೆ. ಇದಲ್ಲದೆ ಪ್ರಸ್ತುತ ವಿಶ್ವದಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯ ಅಭಿವೃದ್ಧಿಯ ತರಬೇತಿಯನ್ನು ಈ ಭಾಗದ ಮಕ್ಕಳು ಕಲಿಯಬೇಕೆಂಬ ಉದ್ದೇಶದಿಂದ ಕೌಶಲ್ಯ ತರಬೇತಿ ಕೇಂದ್ರಕ್ಕೆ ರೂ. 120 ಕೋಟಿಗಳ ಅನುದಾನವನ್ನು ಒದಗಿಸಿದ್ದಾರೆ. ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಯಲಬುರ್ಗಾ ತಾಲ್ಲೂಕು ಮೊದಲ ಸ್ಥಾನದಲ್ಲಿದ್ದು, ಶಿಕ್ಷಣಕ್ಕಾಗಿ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ರಾಯರಡ್ಡಿ ಯವರು ಒದಗಿಸಿಕೊಟ್ಟಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಹಿರೇವಂಕಲಕುoಟಾ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹುಲಿಗೆಮ್ಮ ಬಸವರಾಜ ತಳವಾರ, ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ್ ಮಾಲಗಿತ್ತಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಗದೀಶ್, ಮಾಜಿ ಜಿ.ಪಂ ಸದಸ್ಯರಾದ ಹನುಮಂತಗೌಡ ಚಂಡೂರು, ಮಹೇಶ ಹಳ್ಳಿ, ಅಶೋಕ ತೋಟದ, ಶಾಲೆಯ ಮುಖ್ಯೋಪಾಧ್ಯಾಯರಾದ ಬಾಬುಸಾಬ ಲೈನ್ದಾರ್ ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು, ಶಾಲೆಯ ಶಿಕ್ಷಕರು, ಜನಪ್ರತಿನಿಧಿಗಳು, ಶಾಲೆಯ ಮಕ್ಕಳು ಸೇರಿದಂತೆ ಹಿರೇವಂಕಲಕುoಟಾ ಗ್ರಾಮಸ್ಥರು ಉಪಸ್ಥಿತರಿದ್ದರು.

ವಿವಿಧ ಕಾರ್ಯಕ್ರಮಗಳಿಗೆ ಸಚಿವರಿಂದ ಚಾಲನೆ: ಯಲಬುರ್ಗಾ ತಾಲ್ಲೂಕಿನ ಹುಲೇಗುಡ್ಡ ಗ್ರಾಮ ಮತ್ತು ದ್ಯಾಂಪುರ ಗ್ರಾಮದಲ್ಲಿ ನೂತನ ಸರ್ಕಾರಿ ಪ್ರೌಢಶಾಲೆಗಳನ್ನು ಸಚಿವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಹಾಗೂ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಸವರಾಜ ರಾಯರಡ್ಡಿ, ಶಿಕ್ಷಣ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.

prajaprabhat

Recent Posts

ಇಂದ್ರಾನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಕಾನೂನುಗಳ ಜಾಗೃತಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಇಂದ್ರಾನಗರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಹಕ್ಕುಗಳ & ಮಕ್ಕಳ ಪರವಾದ…

3 hours ago

ತಾಯಿಯ ಎದೆಹಾಲು ಮಗುವಿನ ಮೊದಲ ಲಸಿಕೆ: ಶಿವಾನಂದ ಪೂಜಾರ

ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮಕೊಪ್ಪಳ.05.ಆಗಸ್ಟ್.25 ತಾಯಿ ಎದೆಹಾಲು ಮಗುವಿನ ಸರ್ವತೋಮಕ ಬೆಳವಣಿಗೆಗಾಗಿ ಮುಖ್ಯವಾಗಿದ್ದು, ತಾಯಿ ಎದೆಹಾಲು ಮಗುವಿಗೆ ನೀಡುವ ಮೊದಲ…

3 hours ago

ಭಾಗ್ಯನಗರ: ಮಾರ್ಗಸೂಚಿ ಪಾಲನೆಯೊಂದಿಗೆ ಗಣೇಶ ಚತುರ್ಥಿ ಆಚರಿಸಲು ಮನವಿ

ಕೊಪ್ಪಳ.05.ಆಗಸ್ಟ್ .25: ಕೊಪ್ಪಳ ತಾಲ್ಲೂಕಿನ ಭಾಗ್ಯನಗರ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿ.ಓ.ಪಿ) ಹಾಗೂ ರಾಸಾಯನಿಕ ಗುಣಗಳುಳ್ಳ…

3 hours ago

ವ್ಯಕ್ತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ

ಕೊಪ್ಪಳ.05.ಆಗಸ್ಟ್.25: ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ಕೃಷ್ಣಗಿರಿ ಕಾಲೋನಿಯ ನಿವಾಸಿ ಶಂಕ್ರಪ್ಪ ತಂದೆ ಬಸಪ್ಪ ಅಂಗಡಿ ಎಂಬ 38 ವರ್ಷದ…

4 hours ago

9ನೇ ವರ್ಷದ ಸಸ್ಯಸಂತೆ & ತೋಟಗಾರಿಕೆ ಅಭಿಯಾನ ಆಯೋಜನೆಗೆ ಕ್ರಮ- ಕೃಷ್ಣ ಉಕ್ಕುಂದ

ಕೊಪ್ಪಳ.05.ಆಗಸ್ಟ್.25: ತೋಟಗಾರಿಕೆ ಇಲಾಖೆಯಿಂದ 2025-26ನೇ ಸಾಲಿನಲ್ಲಿ 9ನೇ ವರ್ಷದ ಸಸ್ಯಸಂತೆ ಮತ್ತು ತೋಟಗಾರಿಕೆ ಅಭಿಯಾನವನ್ನು ಆಯೋಜಿಸಲಾಗುತ್ತಿದೆ ಎಂದು ಕೊಪ್ಪಳ ತೋಟಗಾರಿಕೆ…

4 hours ago

ಆಗಸ್ಟ್ 7ರಂದು ಕೊಪ್ಪಳದಲ್ಲಿ ವಾಕ್ ಇನ್ ಇಂಟರ್‌ವ್ಯೂವ್

ಕೊಪ್ಪಳ.05.ಆಗಸ್ಟ್ .25: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ವಾಕ್ ಇನ್ ಇಂಟರ್‌ವ್ಯೂವ್ ಅನ್ನು ಆಗಸ್ಟ್ 7ರಂದು ಬೆಳಿಗ್ಗೆ 10…

4 hours ago